ನವದೆಹಲಿ:ಗುಜರಾತ್ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ ಏಪ್ರಿಲ್ 17ರಂದು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಕಾರ್ಮಿಕರ ವೇತನ, ಕೆಲಸದ ಅವಧಿ ಮುಂತಾದ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳಿರುವ ಕಾರ್ಖಾನೆ ಕಾಯ್ದೆ-1948 ಅನ್ನು ಪಾಲನೆ ಮಾಡುವುದರ ಬಗ್ಗೆ ರಾಜ್ಯದ ಎಲ್ಲ ಕಾರ್ಖಾನೆಗಳಿಗೆ ಸರ್ಕಾರ ವಿನಾಯಿತಿ ನೀಡಿ, ಹೊಸ ಅಧಿಸೂಚನೆ ಹೊರಡಿಸಿತ್ತು.
ಇದರ ಪರಿಣಾಮವಾಗಿ ಕಾರ್ಮಿಕರ ಕೆಲಸದ ಸಮಯ 7 ಗಂಟೆಯಿಂದ 12 ಗಂಟೆಗೆ, ವಾರದ ಕೆಲಸವನ್ನು 48 ಗಂಟೆಗಳಿಂದ 72 ಗಂಟೆಗಳಿಗೆ, ಮೊದಲು 5 ಗಂಟೆಗಳ ನಂತರ ನೀಡುತ್ತಿದ್ದ 30 ನಿಮಿಷದ ವಿರಾಮದ ವೇಳೆಯನ್ನು 6 ಗಂಟೆಗಳ ನಂತರ ನೀಡಲು ಕಾರ್ಖಾನೆಗಳು ಮುಂದಾಗಿದ್ದವು.
ಗುಜರಾತ್ ಸರ್ಕಾರದ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯದ ವ್ಯಾಪಾರ ಸಂಘಟನೆಗಳು, ಗುಜರಾತ್ ಮಜದೂರ್ ಸಭಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ನ್ಯಾಯಕ್ಕಾಗಿ ಮೊರೆ ಹೋದವು.
ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಇದೊಂದು ಕಾನೂನು ಬಾಹಿರ ನಿರ್ಧಾರವಾಗಿದೆ ಎಂದು ಉಲ್ಲೇಖಿಸಿದೆ.