ನವದೆಹಲಿ:ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಈ ಜಾಮೀನು ಅರ್ಜಿ ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಇಡಿ ಪರ ವಕೀಲರು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾ ಮಾಡುವಂತೆ ಡಿ.ಕೆ. ಶಿವಕುಮಾರ್ ಕೂಡಾ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ನೇತೃತ್ವದ ಪೀಠ ಅರ್ಜಿ ವಜಾಗೊಳಿಸಿದ್ದು, ಡಿ.ಕೆ. ಶಿವಕುಮಾರ್ ಇದೀಗ ನಿರಾಳರಾಗಿದ್ದಾರೆ.
ಇದೇ ವೇಳೆ, ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಿಂದ ಡಿ.ಕೆ.ಶಿಗೆ ನೋಟಿಸ್ ಜಾರಿಯಾಗಿದೆ ಎಂಬ ಮಾಹಿತಿ ಹರಿದಾಡುತ್ತಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸರ್ವೋಚ್ಛ ನ್ಯಾಯಾಲಯ ನಮ್ಮಿಂದ ಯಾವುದೇ ರೀತಿಯ ನೋಟಿಸ್ ಜಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಡಿ.ಕೆ. ಸುರೇಶ್ ಹೇಳಿದ್ದೇನು?
ಡಿಕೆಶಿ ಸಹೋದರ ಡಿ.ಕೆ. ಸುರೇಶ್ ಮಾತು
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ ಸುರೇಶ್, ಇಡಿ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಡಿಕೆಶಿಗೆ ಇವತ್ತು ರಿಲೀಫ್ ಸಿಕ್ಕಿದೆ. ಇನ್ನೂ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು ಅವು ಮುಕ್ತಾಯಗೊಳ್ಳಬೇಕಿದೆ ಎಂದು ತಿಳಿಸಿದರು.