ನವದೆಹಲಿ:ಮರುಪರೀಕ್ಷೆಯ ಫಲಿತಾಂಶಗಳನ್ನು ಆದಷ್ಟು ಬೇಗ ಪ್ರಕಟಿಸುವಂತೆ ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಸಿಬಿಎಸ್‍ಇ) ಹಾಗೂ ಮರುಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾತಿ ಖಚಿತಪಡಿಸುವಂತೆ ವಿಶ್ವವಿದ್ಯಾಲಯ ಧನಸಹಾಯ ಆಯೋಗಕ್ಕೆ(ಯುಜಿಸಿ) ಸುಪ್ರೀಂ ಕೋರ್ಟ್ ಸೂಚಿಸಿದೆ.
ಮರುಪರೀಕ್ಷೆ ಬರೆದ ವಿದ್ಯಾರ್ಥಿಗಳ ಕಾಲೇಜು ಪ್ರವೇಶಾತಿ ಖಚಿತಪಡಿಸಿ: ಯುಜಿಸಿ, ಸಿಬಿಎಸ್‌ಇಗೆ ಸುಪ್ರೀಂ ಸೂಚನೆ - ಕಾಲೇಜು ಪ್ರವೇಶಾತಿ
ಕಾಲೇಜು ಪ್ರವೇಶಾತಿಯ ಗಡುವನ್ನು ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮರುಪರೀಕ್ಷೆಯ ಫಲಿತಾಂಶ ಮತ್ತು ಪ್ರವೇಶದ ಕುರಿತು ಚರ್ಚಿಸಿ, ಪ್ರವೇಶಾತಿಯಿಂದ ಈ ವಿದ್ಯಾರ್ಥಿಗಳು ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ಸಿಬಿಎಸ್‍ಇ ಮತ್ತು ಯುಜಿಸಿಗೆ ಸೂಚಿಸಿದೆ.
ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠವು ಇಂದು ಕಾಲೇಜು ಪ್ರವೇಶಾತಿಯ ಗಡುವನ್ನು ವಿಸ್ತರಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಗಳನ್ನು ಕೈಗೆತ್ತಿಕೊಂಡಿತು. ಕೋವಿಡ್ ಪರಿಸ್ಥಿತಿಯಿಂದಾಗಿ ಈ ಬಾರಿಯ ಪರೀಕ್ಷೆ ಹಾಗೂ ಮರುಪರೀಕ್ಷೆಗಳು ವಿಳಂಬವಾಗಿವೆ. ಅಲ್ಲದೇ ಫಲಿತಾಂಶಗಳನ್ನು ಸಹ ತಡವಾಗಿ ಘೋಷಿಸಲಾಗುತ್ತಿದೆ. ಅಕ್ಟೋಬರ್ನಿಂದ ಕಾಲೇಜುಗಳು ಪುನಾರಂಭವಾಗಲಿವೆ. ಹೀಗಾಗಿ ಕಾಲೇಜುಗಳ ಪ್ರವೇಶಾತಿ ಗಡುವನ್ನು ವಿಸ್ತರಿಸುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಇಂದಿನಿಂದ ಸಿಬಿಎಸ್‌ಇಯ 10 ಹಾಗೂ 12ನೇ ತರಗತಿಯ ಮರುಪರೀಕ್ಷೆಗಳು ಆರಂಭವಾಗಿದ್ದು, ಸೆ.29 ರವರೆಗೆ ನಡೆಯಲಿವೆ. ಮರುಪರೀಕ್ಷೆ ಬರೆದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಮತ್ತು ಪ್ರವೇಶದ ಕುರಿತು ಎರಡು ದಿನದೊಳಗೆ ಸಿಬಿಎಸ್‍ಇ ಮತ್ತು ಯುಜಿಸಿ ಜೊತೆಯಾಗಿ ಚರ್ಚಿಸಿ, ಪ್ರವೇಶಾತಿಯಿಂದ ಈ ವಿದ್ಯಾರ್ಥಿಗಳು ಹೊರಗುಳಿಯದಂತೆ ನೋಡಿಕೊಳ್ಳಿ ಎಂದು ನ್ಯಾಯಪೀಠ ಹೇಳಿದೆ. ಸೆ. 24 ರಂದು ಈ ಬಗ್ಗೆ ಮತ್ತೆ ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದೆ.