ನವದೆಹಲಿ:ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಪ್ರತ್ಯೇಕ ಪ್ರವೇಶ ಪರೀಕ್ಷೆ 'ಎನ್‌ಎಲ್‌ಎಟಿ -2020' ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ವಿಶ್ವವಿದ್ಯಾಲಯವು ತನ್ನ ಐದು ವರ್ಷಗಳ ಬಿಎ ಎಲ್‌ಎಲ್‌ಬಿ ಕೋರ್ಸ್ಗೆ ಸೆಪ್ಟೆಂಬರ್ 12 ರಂದು ನ್ಯಾಷನಲ್ ಲಾ ಅಪ್ಟಿಟ್ಯೂಡ್ ಟೆಸ್ಟ್ (NLAT) -2020 ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಿತ್ತು. ನ್ಯಾಯಾಲಯ ಅಂತಿಮ ತೀರ್ಪು ನೀಡುವವರೆಗೂ ಪರೀಕ್ಷೆಯ ಫಲಿತಾಂಶ ಪ್ರಕಟಿಸಬಾರದು ಹಾಗೂ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು ಎಂದು ಸೂಚಿಸಲಾಗಿತ್ತು.
ಎನ್‌ಎಲ್‌ಎಟಿ -2020 ಅನ್ನು ಪ್ರಶ್ನಿಸಿ ಎನ್‌ಎಲ್‌ಎಸ್‌ಐಯುನ ಮಾಜಿ ಉಪಕುಲಪತಿ ಪ್ರೊಫೆಸರ್ ಆರ್ ವೆಂಕಟ ರಾವ್ ಹಾಗೂ ಪರೀಕ್ಷಾ ಆಕಾಂಕ್ಷಿಗಳ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು, NLAT -2020 ರದ್ದುಗೊಳಿಸಿದೆ. ಅಲ್ಲದೇ ಸೆಪ್ಟೆಂಬರ್ 28 ರಂದು ನಡೆಯಲಿರುವ ಸಿಎಲ್‌ಎಟಿ -2020 ರ ಪ್ರಕಾರವೇ ಎಲ್ಲಾ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ (NLUs) ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಆದೇಶಿಸಿದೆ.
ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯು (CLAT) ಭಾರತದ 22 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಕೇಂದ್ರೀಕೃತ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯ ಕೂಡ ಇವುಗಳಲ್ಲಿ ಒಂದಾಗಿದೆ.