ನವದೆಹಲಿ:ರಾಜಕೀಯ ನಾಯಕರಿಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಸುಪ್ರೀಂಕೋರ್ಟ್ ನೀಡಿರೋ ನಿರ್ದೇಶನ ಪ್ರಮುಖ ರಾಜಕೀಯ ನಾಯಕರಿಗೆ ತಲೆನೋವಾಗಿದೆ.
ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗಳ ಕ್ರಿಮಿನಲ್ ದಾಖಲೆಗಳನ್ನು ಪ್ರತಿ ಪಕ್ಷವು ತಮ್ಮ ವೆಬ್ಸೈಟ್ನಲ್ಲಿ ನಮೂದಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವು ಎಲ್ಲಾ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಿದೆ. ಇದರ ಜೊತೆಗೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು ಕೂಡಾ, ಆ ಅಭ್ಯರ್ಥಿಯ ಆಯ್ಕೆಗೆ ಕಾರಣಗಳನ್ನೂ ನಮೂದಿಸಬೇಕೆಂದು ಕೋರ್ಟ್ ಹೇಳಿದೆ.
ಇದರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಪರಿಚಯ, ಸಾಧನೆಗಳು ಮತ್ತು ಕ್ರಿಮಿನಲ್ ಹಿನ್ನೆಲೆಯನ್ನು ಪ್ರಕಟಿಸುವಂತೆ ಉನ್ನತ ನ್ಯಾಯಾಲಯವು ಪಕ್ಷಗಳಿಗೆ ನಿರ್ದೇಶನ ನೀಡಿದೆ.
ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ತಿರಸ್ಕಾರ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ಚುನಾವಣಾ ಅಭ್ಯರ್ಥಿಗಳು ಕ್ರಿಮಿನಲ್ ಪೂರ್ವಾಪರಗಳನ್ನು ಬಹಿರಂಗಪಡಿಸುವುದರ ಬಗ್ಗೆ ಹಿನ್ನೆಲೆಯನ್ನು 2018 ರ ಸೆಪ್ಟೆಂಬರ್‌ನಲ್ಲಿ ನೀಡಿದ ತೀರ್ಪಿನಲ್ಲೇ ಸುಪ್ರೀಂ ಹೇಳಿತ್ತು. ಆದರೆ ಈ ತೀರ್ಪನ್ನೂ ಪಕ್ಷಗಳು ಪಾಲಿಸದೆ ಹಿನ್ನೆಲೆಯಲ್ಲಿ ತೀರ್ಪನ್ನು ಪುನರುಚ್ಛರಿಸಿದೆ.