ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತಂತೆ ಸುಪ್ರೀಂ ಮಧ್ಯೆ ಪ್ರವೇಶಿಸಿದ್ದು, ಇದಕ್ಕಾಗಿ ಸಮಿತಿಯೊಂದನ್ನು ರಚಿಸಿದೆ. ಇದೀಗ ಸಮಿತಿಯು ತನ್ನ ಮೊದಲ ಸಭೆಯನ್ನು ಜ.19 ರಂದು ನಡೆಸಲು ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಅನಿಲ್ ಘನ್ವತ್ ತಿಳಿಸಿದ್ದಾರೆ.
ಕಳೆದು 50 ದಿನಗಳಿಂದ ದೆಹಲಿಯಲ್ಲಿ ರೈತರು ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತಂತೆ ಸರ್ಕಾರ ಮತ್ತು ರೈತರ ನಡುವೆ ಸತತ ಸಂಧಾನ ಸಭೆಗಳು ನಡೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತಾಗಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರಿಂ ಕೋರ್ಟ್, ಜ.11ರಂದು ಕಾಯ್ದೆಗಳನ್ನು ಮುಂದಿನ ಆದೇಶದವರೆಗೂ ಜಾರಿ ಮಾಡದಂತೆ ತಡೆ ನೀಡಿತ್ತು. ಇದರ ಜೊತೆಗೆ ಬಿಕ್ಕಟ್ಟು ಪರಿಹರಿಸಲು ನಾಲ್ಕು ಸದಸ್ಯರ ಸಮಿತಿಯನ್ನು ನೇಮಿಸಿತ್ತು.
ಓದಿ: 'ಅಮೆರಿಕ ಸ್ವಾತಂತ್ರ್ಯ ಪ್ರತಿಮೆಗಿಂತಲೂ ಏಕತಾ ಪ್ರತಿಮೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿದೆ'
ಕಳೆದ ವಾರ ಈ ಸಮಿತಿಯಿಂದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಭೂಪಿಂದರ್ ಸಿಂಗ್ ಮಾನ್ ಅವರು ಹಿಂದೆ ಸರಿದಿದ್ದು, ಇವರನ್ನು ಹೊರತುಪಡಿಸಿ ಅನಿಲ್ ಘನ್ವತ್, ಕೃಷಿ ಅರ್ಥಶಾಸ್ತ್ರಜ್ಞರಾದ ಅಶೋಕ್ ಗುಲಾಟಿ ಮತ್ತು ಪ್ರಮೋದ್ ಕುಮಾರ್ ಜೋಶಿ ಸಮಿತಿ ಸದಸ್ಯರಾಗಿದ್ದಾರೆ.
ಕೃಷಿ ಕಾಯ್ದೆಗಳ ಕುರಿತಂತೆ ಮುಂದೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುವ ಸಲುವಾಗಿ ಜ.19 ರಂದು ಪೂಸಾ ಕ್ಯಾಂಪಸ್‌ನಲ್ಲಿ ಮೊದಲ ಸಭೆ ನಡೆಸುತ್ತಿದ್ದೇವೆ. ಸಭೆಯಲ್ಲಿ ಸಮಿತಿಯ ಸದಸ್ಯರು ಮಾತ್ರ ಭಾಗವಹಿಸಲಿದ್ದಾರೆ. ನಾಲ್ವರು ಸದಸ್ಯರಲ್ಲಿ ಒಬ್ಬರು ಸಮಿತಿಯಿಂದ ಹಿಂದೆ ಸರಿದಿದ್ದಾರೆ. ಸುಪ್ರೀಂ ಹೊಸ ಸದಸ್ಯರನ್ನು ನೇಮಿಸದಿದ್ದರೆ ಈಗಿರುವ ಸದಸ್ಯರು ಮುಂದುವರಿಯುತ್ತಾರೆ. ಜ.21ರಿಂದ ಸಮಿತಿ ಕೆಲಸ ಪ್ರಾರಂಭಿಸುತ್ತದೆ ಎಂದು ಅಧ್ಯಕ್ಷ ಘನ್ವತ್ ತಿಳಿಸಿದ್ದಾರೆ.