ಕರ್ನಾಟಕ

karnataka

ವಿಶೇಷ ಅಂಕಣ: ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಿರುವ ರಷ್ಯಾ:ಸೌದಿ ಅರೇಬಿಯಾ ತೈಲ ಬೆಲೆ ಸಮರ

ತೈಲದ ರೀತಿಯ ಹೈಡ್ರೊ ಕಾರ್ಬನ್‌ ಹೊಂದಿರುವ ಮತ್ತು ಅದನ್ನು ರಫ್ತು ಮಾಡುವ ದೇಶಗಳು ತಮ್ಮ ಉತ್ಪಾದನೆ ಮತ್ತು ರಫ್ತನ್ನು ಕಡಿಮೆ ಮಾಡುವ ಅಥವಾ ಹೆಚ್ಚಿಸುವ ಮೂಲಕ ಜಾಣ್ಮೆಯಿಂದ ಬೆಲೆ ನಿರ್ವಹಿಸಲು ಸಮರ್ಥವಾಗಿವೆ. ಇದರ ಪರಿಣಾಮವಾಗಿ ಈ ದೇಶಗಳು ವಿಶ್ವ ಆರ್ಥಿಕತೆ ಮತ್ತು ಇದರ ಸುತ್ತಲಿನ ಭೌಗೋಳಿಕ ರಾಜಕೀಯದ ಮೇಲೆ ಪ್ರಭಾವ ಬೀರುತ್ತವೆ.

By

Published : Mar 23, 2020, 10:31 AM IST

Published : Mar 23, 2020, 10:31 AM IST

Saudi Arabia oil price war
ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತಿರುವ ರಷ್ಯಾ:ಸೌದಿ ಅರೇಬಿಯಾ ತೈಲ ಬೆಲೆ ಸಮರ

ನವದೆಹಲಿ:ಇಂಧನ ಬಳಸುವ ಜಗತ್ತಿಗೆ ತೈಲಬೆಲೆ ಮತ್ತು ಅದರ ಲಭ್ಯತೆ ಬಹುಮುಖ್ಯ ಸಂಗತಿ ಆಗುತ್ತದೆ. ತೈಲದ ರೀತಿಯ ಹೈಡ್ರೊ ಕಾರ್ಬನ್‌ ಹೊಂದಿರುವ ಮತ್ತು ಅದನ್ನು ರಫ್ತು ಮಾಡುವ ದೇಶಗಳು ತಮ್ಮ ಉತ್ಪಾದನೆ ಮತ್ತು ರಫ್ತನ್ನು ಕಡಿಮೆ ಮಾಡುವ ಅಥವಾ ಹೆಚ್ಚಿಸುವ ಮೂಲಕ ಜಾಣ್ಮೆಯಿಂದ ಬೆಲೆ ನಿರ್ವಹಿಸಲು ಸಮರ್ಥವಾಗಿವೆ. ಇದರ ಪರಿಣಾಮವಾಗಿ ಈ ದೇಶಗಳು ವಿಶ್ವ ಆರ್ಥಿಕತೆ ಮತ್ತು ಇದರ ಸುತ್ತಲಿನ ಭೌಗೋಳಿಕ ರಾಜಕೀಯದ ಮೇಲೆ ಪ್ರಭಾವ ಬೀರುತ್ತವೆ.

ತೈಲ ಮಾರುಕಟ್ಟೆ ನಿಯಂತ್ರಿಸಲು 1980 ರ ದಶಕದಲ್ಲಿ 15 ಸದಸ್ಯ ರಾಷ್ಟ್ರಗಳೊಂದಿಗೆ ತೈಲ ಉತ್ಪಾದನಾ ರಾಷ್ಟ್ರಗಳ ಸಂಘಟನೆಯನ್ನು (ಒಪೆಕ್) ಸ್ಥಾಪಿಸಲಾಯಿತು. ರಷ್ಯಾ ಈ ಬಣದ ಭಾಗವಲ್ಲ. ಆದರೆ ಒಪೆಕ್ + ಎಂದು ಕರೆಯಲಾಗುವ ಆ ದೇಶಗಳ ಸಭೆಗಳಲ್ಲಿ ಪಾಲ್ಗೊಳ್ಳುತ್ತದೆ. ಒಪೆಕ್ ತನ್ನಿಂತಾನೇ ಏಕಸ್ವಾಮ್ಯ ಕ್ಲಬ್ ಆಗಿ ಕೆಲಸ ಮಾಡಿದೆ. ರಷ್ಯಾ ಮತ್ತು ಅಮೆರಿಕ ಈಗ ಶೇಲ್ ಅನಿಲ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ತೈಲ ಬೆಲೆಗಳನ್ನು ಕುಶಲತೆಯಿಂದ ನಿರ್ವಹಣೆ ಮಾಡುವ ಸಾಮರ್ಥ್ಯ ಪಡೆದ ಸ್ವತಂತ್ರ ಆಟಗಾರರಾಗಿದ್ದಾರೆ.

ಮಾರ್ಚ್ ಆರಂಭದಲ್ಲಿ, ಕೊರೊನಾ ವೈರಸ್ ದಾಂಗುಡಿ ಇಟ್ಟ ಹೊತ್ತಿನಲ್ಲಿಯೇ ಇತ್ತ ಚೀನಾ, ದಕ್ಷಿಣ ಕೊರಿಯಾ ಮತ್ತು ಇತರ ದೇಶಗಳು ಸಮಾನಾಂತರವಾಗಿ ತೈಲ ಆಮದನ್ನು ಗಣನೀಯವಾಗಿ ಕಡಿಮೆಗೊಳಿಸಿದವು. ಇದರ ಪರಿಣಾಮ ಬೇಡಿಕೆ ಕಡಿಮೆಯಾಗಿ ತೈಲ ಬೆಲೆಗಳು ಕುಸಿಯಿತು. ಬ್ಯಾರೆಲ್‌ಗೆ ಡಾಲರ್ 50ಕ್ಕೆ ಮಾರಾಟವಾಗಲು ಆರಂಭಿಸಿತು ಕಚ್ಚಾ ತೈಲ. ಈ ಬೆಲೆ ಕುಸಿತ ತಡೆಯುವ ಸಲುವಾಗಿ ಸೌದಿ ಅರೇಬಿಯಾ ತೈಲ ಉತ್ಪಾದನೆ ಕಡಿಮೆ ಮಾಡಲು ಮುಂದಾಯಿತು. ಆದರೆ ರಷ್ಯಾ ಅಧ್ಯಕ್ಷ ಪುಟಿನ್ ಉತ್ಪಾದನಾ ಕುಸಿತ ಒಪ್ಪಲು ನಿರಾಕರಿಸಿದರು ಮತ್ತು ಭಾರಿ ಪ್ರಮಾಣದಲ್ಲಿ ಉತ್ಪಾದನೆ ಮುಂದುವರೆಸಿದರು. ರಷ್ಯಾ ‘ ನಯೆಟ್ ’ ( ಹಾಗೆಂದರೆ ರಷ್ಯನ್ ಭಾಷೆಯಲ್ಲಿ ‘ ಇಲ್ಲ’ ಎಂದರ್ಥ ) ಎಂದು ತಲೆ ಆಡಿಸುತ್ತಿದ್ದಂತೆ ತೈಲ ಬೆಲೆ ಪಾತಾಳಕ್ಕೆ ಇಳಿದು 1991ರ ಕೊಲ್ಲಿ ಯುದ್ಧದ ಹೊತ್ತಿನಲ್ಲಿದ್ದ ಬೆಲೆಯಷ್ಟು ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿತು.

ತನ್ನನ್ನು ತಾನು ವಿಶ್ವದ ತೈಲ ಪ್ರಮುಖ ಎಂದು ಕರೆದುಕೊಳ್ಳುವ ಸೌದಿ ಅರೇಬಿಯಾ ಪುಟಿನ್ ಜೊತೆ ‘ಕಣ್ಣಿಗೆ ಕಣ್ಣು’ ಎಂಬಂತೆ ಹೋರಾಟ ನಡೆಸಲು ನಿರ್ಧರಿಸಿತು. ಸೌದಿ ಕಚ್ಚಾ ಬೆಲೆ ಕಡಿತ ಮಾಡಿದ್ದು ಮಾತ್ರವಲ್ಲದೆ ತೈಲದ ಉತ್ಪಾದನೆ ಕೂಡ ಹೆಚ್ಚಿಸಿತು.ಇದರಿಂದಾಗಿ ತೈಲಬೆಲೆ ಮತ್ತಷ್ಟು ಪಾತಾಳಕ್ಕೆ ಸರಿದು ಬ್ಯಾರೆಲ್‌ಗೆ ಡಾಲರ್ 30ಕ್ಕೆ ಇಳಿಯಲು ಕಾರಣ ಆಯಿತು. ಇನ್ನು ಮುಂದೆ ತೈಲಬೆಲೆ ಬ್ಯಾರೆಲ್‌ಗೆ ಡಾಲರ್ 20 ರಷ್ಟು ಇಳಿಯಬಹುದು ಎಂದು ಅಮೆರಿಕ ಮೂಲದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ‘ಗೋಲ್ಡ್ಮನ್ ಸ್ಯಾಚ್ಸ್’ ಅಂದಾಜು ಮಾಡಿದೆ.

ಹಾಗಾದರೆ ಸೋತವರು ಯಾರು ಮತ್ತು ಗೆದ್ದವರು ಯಾರು? ತೈಲದಿಂದ ಬರುವ ಲಾಭದ ಮೇಲೆ ಅವಲಂಬಿತವಾದ ರಷ್ಯಾ ಏಕೆ ಅಂತಹ ಅಪಾಯ ಎದುರು ಹಾಕಿಕೊಂಡಿತು?

ಪುಟಿನ್ ಅವರ ತೈಲದ ಪಗಡೆ ಆಟಕ್ಕೆ ಹಲವು ಕಾರಣಗಳು ಇವೆ. ಅವುಗಳಲ್ಲಿ ಮೊದಲನೆಯದು, ರಷ್ಯಾ ಬೃಹತ್ ವಿತ್ತೀಯ ಮತ್ತು ಚಿನ್ನದ ನಿಕ್ಷೇಪಗಳನ್ನು ನಿರ್ಮಿಸಿರುವುದು ಮತ್ತು 2015 ರ ತೈಲ ಆಘಾತ ಮತ್ತು ಆರ್ಥಿಕ ಹಿಂಜರಿತದಿಂದಾಗಿ ತನ್ನ ಬಜೆಟ್ ಅನ್ನು ಬಿಗಿಗೊಳಿಸಿರುವುದು. ಉಕ್ರೇನ್‌ ಜೊತೆಗಿನ ಸಂಘರ್ಷದ ವಿಷಯದಲ್ಲಿ ಪಾಶ್ಚಾತ್ಯರು ತನ್ನ ವಿರುದ್ಧ ಕೈಗೊಂಡ ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾ ಅದರ ಆರ್ಥಿಕತೆಯನ್ನು ‘ಬಹುತೇಕ’ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಇಡಲು ಕಾರಣ ಆಗಿದೆ.

ಆದ್ದರಿಂದ ತೈಲ ಬೆಲೆಗಳ ಕುಸಿತ ಅನೇಕರು ಗ್ರಹಿಸಿದಂತೆ ರಷ್ಯಾಕ್ಕೆ ಹೊಡೆತ ನೀಡಿಲ್ಲ. ವಾಸ್ತವವಾಗಿ ರಷ್ಯಾ ಒಪೆಕ್‌ನಲ್ಲಿ ಅರಬ್ಬರು ಮತ್ತು ಇತರರ ಮೇಲೆ ಪ್ರಹಾರ ನಡೆಸುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಸೌದಿ ಜೊತೆಗಿನ ಉತ್ತಮ ಸಂಬಂಧ ಮತ್ತು ತೈಲ ಬೆಲೆಗಳ ಮೇಲಿನ ಸಹಯೋಗದ ಬಗ್ಗೆ ರಷ್ಯನ್ನರು ಏನು ಹೇಳಿದರೂ, ಸಿರಿಯಾದ ಅಸ್ಸಾದ್ ಆಡಳಿತಕ್ಕೆ ರಷ್ಯಾದ ಸೇನಾ ಬೆಂಬಲ ದೊರೆತದ್ದನ್ನು ಹಾಗೂ ಪಶ್ಚಿಮ ಏಷ್ಯಾದಲ್ಲಿ ರಷ್ಯಾದ ಧೋರಣೆಗಳನ್ನು ಸೌದಿಗಳು ವಿರೋಧಿಸಿದ ರೀತಿಗೆ ರಷ್ಯನ್ನರು ಬೆಚ್ಚಿ ಬಿದ್ದಿದ್ದಾರೆ. ಆದ್ದರಿಂದ ಸೌದಿಗಳಿಗೆ ನೋವುಂಟು ಮಾಡುವ ಮೂಲಕ ಅವರ ಭೌಗೋಳಿಕ- ರಾಜಕೀಯವಾಗಿ ಅವರು ಇರಬೇಕಾದ ಸ್ಥಾನ ತೋರಿಸಲು ರಷ್ಯಾಕ್ಕೆ ಸಾಧ್ಯವಾಗಿದೆ.

ಎರಡನೆಯದಾಗಿ, ಶೇಲ್ ಅನಿಲ ಉತ್ಪಾದನೆ ಏರಿಕೆಯ ಕಾರಣದಿಂದಾಗಿ ಪ್ರಮುಖ ತೈಲ ಉತ್ಪಾದಕ, ರಫ್ತುದಾರ ಹಾಗೂ ಗ್ರಾಹಕ ಕೂಡ ಆಗಿರುವ ಅಮೆರಿಕ, ರಷ್ಯಾ ಮತ್ತು ಸೌದಿ ಮಾರುಕಟ್ಟೆಯ ಪ್ರಾಬಲ್ಯ ಪ್ರಶ್ನಿಸುತ್ತಿದ್ದು ಪ್ರಮುಖ ಮಾರುಕಟ್ಟೆಗಳನ್ನು ಮೂಲೆಗುಂಪು ಮಾಡುವ ಮೂಲಕ ತನ್ನ ತೈಲ ಲಾಭ ಮತ್ತು ಬೆಲೆಗಳನ್ನು ಹೆಚ್ಚಿಸಿಕೊಳ್ಳಲು ಹೊರಟಿತ್ತು. ಆದರೆ ಪ್ರಸ್ತುತ ತೈಲ ಬೆಲೆ ಸಮರದಿಂದಾಗಿ ಅಮೆರಿಕ ಕೂಡ ಬೆಲೆ ಮತ್ತು ಉತ್ಪಾದನೆ ಎರಡಕ್ಕೂ ಕಡಿವಾಣ ಹಾಕುವ ಒತ್ತಡಕ್ಕೆ ಸಿಲುಕಿದೆ. ಪರಿಣಾಮ ಅಮೆರಿಕ ತೈಲ ದಾಸ್ತಾನು ಕುಸಿತಕ್ಕೆ ಕಾರಣವಾಗಿದ್ದು, ಶೇಲ್ ಕಂಪನಿಗಳ ಕಾರ್ಮಿಕರನ್ನು ಅದು ವಜಾ ಮಾಡಿದೆ. ಅಧ್ಯಕ್ಷ ಟ್ರಂಪ್ ಅಮೆರಿಕದ ತೈಲ ಕಂಪನಿಗಳ ಬಗ್ಗೆ ಚಿಂತಿತರಾಗಿದ್ದಾರೆ.

ಅಧ್ಯಕ್ಷ ಟ್ರಂಪ್ ಒಂದು ಹಂತದಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸುವ ಒತ್ತಡದಲ್ಲಿ ಇರುವುದು ಪುಟಿನ್ ಅವರ ಕೈ ಮೇಲಾಗುವಂತೆ ಮಾಡಿದೆ. ಪುಟಿನ್ ಈಗ ಏಕಕಾಲಕ್ಕೆ ಅಮೆರಿಕದ ಕೈ ನುಣುಚಿದ್ದು ಮಾತ್ರವಲ್ಲದೆ ಒಪೆಕ್ ದೇಶಗಳನ್ನು ಬದಿಗೆ ಸರಿಸಿದ್ದಾರೆ. ನಿರ್ಬಂಧಗಳ ಮೂಲಕ ರಷ್ಯಾವನ್ನು ಹಿಂಡಿ ಹಿಪ್ಪೆ ಮಾಡಿದ್ದಕ್ಕಾಗಿ ಅಮೆರಿಕ ವಿರುದ್ಧ ಪ್ರತಿ ತಂತ್ರ ಹೆಣೆದು ಅದು ಯಶಸ್ವಿ ಆಗಿದೆ. ಅಮೆರಿಕದ ನಿರ್ಬಂಧಕ್ಕೆ ಒಳಗಾದ ಮತ್ತೊಂದು ರಾಷ್ಟ್ರ ವೆನೆಜುವೆಲಾಕ್ಕೆ ರಷ್ಯಾದ ಪ್ರಮುಖ ತೈಲ ಕಂಪೆನಿ ರಾಸ್ನೆಫ್ಟ್ ಇಂಧನ ಮಾರಾಟ ಮಾಡುತ್ತಿತ್ತು. ಕಳೆದ ತಿಂಗಳು ಅಮೆರಿಕ ರಾಸ್ನೆಫ್ಟ್ ಮೇಲೆ ನಿರ್ಬಂಧ ಹೇರಿತು. ಇದು ರಷ್ಯಾ ಪ್ರತಿತಂತ್ರ ಹೆಣೆಯಲು ಕಾರಣ.

ಮೂರನೆಯದು, ಚೀನಾ ಮತ್ತು ಯುರೋಪ್ ದೇಶಗಳಂತೆ ರಷ್ಯನ್ನರು ತಮ್ಮ ತೈಲಕ್ಕೆ ಸಾಕಷ್ಟು ಸುರಕ್ಷಿತ ಮಾರುಕಟ್ಟೆ ಹೊಂದಿದ್ದಾರೆ. ಆದ್ದರಿಂದ ಈ ತೈಲ ಜೂಜಾಟದಲ್ಲಿ ಪುಟಿನ್ ಕೈಚಳಕ ಸಾಂಗವಾಗಿ ನಡೆಯಿತು.

ಆದರೆ ಸಾಮಾನ್ಯ ಗ್ರಾಹಕರ ಪಾಡು ಏನು?

ಗ್ರಾಹಕರು ’ಮುಕ್ತ ಮಾರುಕಟ್ಟೆ ಕುಸಿತ’ದ ಲಾಭ ಪಡೆಯಲು ಸಜ್ಜಾಗಿದ್ದು, ಅಲ್ಲಿ ಅವರು ಅಗ್ಗದ ಅನಿಲ ಬೆಲೆಗಳನ್ನು ಎದುರು ನೋಡಬೇಕು. ಆದರೆ ಇಲ್ಲಿಯೇ ದೊಡ್ಡ ತೈಲ ಕಂಪನಿಗಳು ಎದುರಾಗುತ್ತವೆ. ಅಮೆರಿಕ ಮತ್ತು ಇತರ ಒಪೆಕ್ ದೇಶಗಳ ತೈಲ ಕಂಪನಿಗಳು ತಮ್ಮ ಲಾಭ ಕುಸಿಯುತ್ತಿದ್ದಂತೆ ಅಲ್ಲಿನ ಸರ್ಕಾರಗಳ ಮೇಲೆ ಒತ್ತಡ ಹೇರುತ್ತಿವೆ.

ಅವುಗಳು ರಷ್ಯಾ ಮತ್ತು ಸೌದಿ ಅರೇಬಿಯಾದಿಂದ ಅಗ್ಗದ ಸರಬರಾಜಿನ ಮೇಲೆ ಸುಂಕ ಹೇರಬೇಕು ಅಥವಾ ಸ್ಥಳೀಯ ತೈಲ ಕಂಪನಿಗಳು ಮತ್ತು ಸಂಸ್ಕರಣಾಗಾರಗಳಿಗೆ ದೊಡ್ಡ ಮಟ್ಟದ ಸಬ್ಸಿಡಿ ಮತ್ತು ತೆರಿಗೆ ಕಡಿತ ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಉದಾಹರಣೆಗೆ ಭಾರತದಲ್ಲಿ, ಜಾಗತಿಕ ಕಚ್ಚಾ ಕುಸಿತದ ಹೊರತಾಗಿಯೂ, ಭಾರತ ಸರ್ಕಾರ ಅಬಕಾರಿ ಸುಂಕ ಹೆಚ್ಚಿಸಿದೆ, ಇದರಿಂದ ಸರ್ಕಾರ ಲಾಭ ಗಳಿಸುತ್ತಿದ್ದು ಗ್ರಾಹಕರು ಅಗ್ಗದ ದರದಲ್ಲಿ ಪೆಟ್ರೋಲ್ ಪಡೆಯಲು ಸಾಧ್ಯವಾಗುತ್ತಿಲ್ಲ.

ಕೊರೊನಾ ವೈರಸ್‌ ಆತಂಕದಿಂದಾಗಿ ಹಣದುಬ್ಬರ ಮತ್ತು ತೈಲ ಬಿಕ್ಕಟ್ಟುಗಳ ಮೇಲಿನ ಕಳವಳ ಕಡಿಮೆಯಾಗುತ್ತಿದ್ದು ದೊಡ್ಡ ಔಷಧಾಲಯಗಳಂತೆ ದೊಡ್ಡ ತೈಲ ಉದ್ಯಮವೂ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಆದರೆ ಲಾಭ ಗಳಿಸುವವರು ಮತ್ತು ಸೋತವರು ಯಾರು ಎಂದು ಜನ ಅರ್ಥಮಾಡಿಕೊಳ್ಳದಿದ್ದರೆ ಮತ್ತು ತಮ್ಮ ಹಿತದೃಷ್ಟಿಯಿಂದ ಸಾಮೂಹಿಕವಾಗಿ ವರ್ತಿಸದಿದ್ದರೆ, ದೊಡ್ಡ ದೇಶ ಅದರಿಚ್ಛೆಯಂತೆ ನಡೆಯಬಹುದು.

- ಅನುರಾಧಾ ಚೆನೊಯ್

(ನಿವೃತ್ತ ಪ್ರಾಧ್ಯಾಪಕರು ಮತ್ತು ಮಾಜಿ ಡೀನ್,ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್, ಜೆಎನ್​ಯು)

ABOUT THE AUTHOR

...view details