ಹೈದರಾಬಾದ್: ಮಹಾತ್ಮನ ಸತ್ಯಾಗ್ರಹದ ಕಲ್ಪನೆಯು ರಾಜಕೀಯ ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಒಂದು ತೊಟ್ಟು ರಕ್ತ ಚೆಲ್ಲದೆ ಅನ್ಯಾಯದ ವಿರುದ್ಧ ಹೋರಾಡಲು ದೊರೆತ ಬಲು ದೊಟ್ಟ ಕೊಡುಗೆ. ಇದರಿಂದಾಗಿಯೇ ಅಹಿಂಸಾ ಸತ್ಯಾಗ್ರಹದ ಹೋರಾಟದ ಹಾದಿಯ ಮೂಲಕ ಭಾರತ ಬ್ರಿಟೀಷರ ಆಡಳಿತದಿಂದ ಮುಕ್ತವಾಗಿ ಸ್ವಾತಂತ್ರ್ಯ ಗಳಿಸಿತು.
ಅಹಿಂಸಾ ಸತ್ಯಾಗ್ರಹದ ಮಾರ್ಗವು ಲಕ್ಷಾಂತರ ನಿರಾಯುಧ ಪುರುಷರು ಮತ್ತು ಮಹಿಳೆಯರಿಗೆ ಗ್ರೇಟ್ ಬ್ರಿಟನ್‌ನ ಸಾಮ್ರಾಜ್ಯಶಾಹಿ ಆಡಳಿತ ಧೋರಣೆಯ ವಿರುದ್ಧ ದಂಗೆ ಏಳಲು ಪ್ರೇರೇಪಿಸಿತು. ಸತ್ಯಾಗ್ರಹ ಚಳವಳಿಯ ಮೂಲಕ ಭಾರತದ ಪ್ರತಿಯೊಬ್ಬ ಹೋರಾಟಗಾರನಲ್ಲಿದ್ದ ಆತ್ಮವಿಶ್ವಾಸವೇ 'ಬ್ರಿಟಿಷರೇ ‘ಭಾರತ ಬಿಟ್ಟು ತೊಲಗಿ’ ಎಂದು ಘಂಟಾಘೋಷವಾಗಿ ಹೇಳುವ ಧೈರ್ಯವನ್ನು ನೀಡಿತು.
ನಿರಾಯುಧ ಸೈನಿಕರೇ ಮಹಾತ್ಮನ ಶಕ್ತಿ ದಕ್ಷಿಣ ಆಫ್ರಿಕಾದಲ್ಲಿದ್ದ ಬಿಳಿಯರ ಜನಾಂಗೀಯ ಆಡಳಿತದ ವಿರುದ್ಧ ಸತ್ಯಾಗ್ರಹ ಚಳವಳಿಯನ್ನು ಯಶಸ್ವಿಯಾಗಿ ಪ್ರಾರಂಭಿಸಿದ ಮಹಾತ್ಮ ಗಾಂಧಿ, 1915 ರಲ್ಲಿ ಭಾರತಕ್ಕೆ ಮರಳಿದರು. ನಂತರ ಬ್ರಿಟಿಷ್ ಆಡಳಿತದ ವಿರುದ್ಧ ಬೃಹತ್ ಹೋರಾಟವನ್ನು ಆರಂಭಿಸಲು ಲಕ್ಷಾಂತರ ನಿರಾಯುಧ ಪುರುಷರು ಮತ್ತು ಮಹಿಳೆಯರನ್ನು ಸಜ್ಜುಗೊಳಿಸುವಲ್ಲಿ ಮುಂದಡಿ ಇಟ್ಟರು.
ಗಾಂಧೀಜಿಯು ಭಾರತದಲ್ಲಿ ಸತ್ಯಾಗ್ರಹದ ಮೊದಲ ಪ್ರಯೋಗವನ್ನು 1917ರಲ್ಲಿ ಬಿಹಾರದ ಚಂಪಾರಣ್ನಲ್ಲಿ 'ಇಂಡಿಗೋ' ಕೃಷಿ ಪದ್ಧತಿಯ ಸಮಗ್ರ ಶೋಷಣೆ ವ್ಯವಸ್ಥೆಯ ವಿರುದ್ಧ ಮಾಡಿದರು. ಚಂಪಾರಣ್ ಸತ್ಯಾಗ್ರಹದಿಂದಾಗಿ ಕಡ್ಡಾಯ ಇಂಡಿಗೋ ಕೃಷಿ ರದ್ದುಗೊಂಡಿತು. ಈ ಮೂಲಕ ಅಹಿಂಸಾ ಮಾರ್ಗದ ಹೋರಾಟದ ಧನಾತ್ಮಕ ಪರಿಣಾಮವೇನು ಎಂಬುದು ಜನರಿಗೆ ತಿಳಿಯಿತು.
ಚಂಪಾರಣ್ ಸತ್ಯಾಗ್ರಹದ ಬಳಿಕ, ಸತ್ಯಾಗ್ರಹದ ತಾಕತ್ತೇನು ಎಂಬುದು ಭಾರತದ ಜನಸಾಮಾನ್ಯನಿಗೂ ಅರ್ಥವಾಗತೊಡಗಿತು. ಅಷ್ಟೇ ಅಲ್ಲ, ಯಾವುದೇ ಬಾಂಬ್ಗಳನ್ನೆಸೆಯದೆ, ಬಂದೂಕು, ಶಸ್ತ್ರಾಸ್ತ್ರಗಳನ್ನು ಹಿಡಿಯದೆ, ಬ್ರಿಟೀಷ್ ರಾಜರ ವಿರುದ್ಧ ಹೋರಾಡುವ ಧೈರ್ಯ ಭಾರತೀಯ ಹೋರಾಟಗಾರರಿಗೆ ಬಂತು. ಬಳಿಕ ಸತ್ಯಾಗ್ರಹ ಅನ್ನೋದೇ ಭಾರತೀಯ ಹೋರಾಟಗಾರರ ಆಯುಧವಾಯ್ತು. ಹಿಂದೂ ಹಾಗೂ ಮುಸ್ಲಿಮರು ಸಂಘಟಿತರಾಗಿ ಹೋರಾಡಿದ ಖಿಲಾಫತ್ ಚಳುವಳಿಗೂ ಸತ್ಯಾಗ್ರಹ ಚಳವಳಿ ಪ್ರೇರಣೆಯಾಯ್ತು. ಗಾಂಧೀಜಿಯವರು, ಖಿಲಾಫತ್ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದ ಷೌಖತ್ ಅಲಿ ಹಾಗೂ ಮೊಹಮ್ಮದ್ ಅಲಿ ಸಹೋದರರಿಗೆ ಸಂಪೂರ್ಣ ಬೆಂಬಲ ನೀಡಿದರು. ಹಿಂದೂ ಮುಸ್ಲಿಮರ ಸಂಘಟಿತ ಹೋರಾಟದಿಂದಾಗಿಯೇ ಖಿಲಾಫತ್ ಚಳವಳಿಯು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಒಂದು ರಾಷ್ಟ್ರೀಯ ಚಳುವಳಿಯಾಗಿ ಗುರುತಿಸಲ್ಪಟ್ಟಿತು.
ಸತ್ಯ, ಅಹಿಂಸಾ ಮಾರ್ಗವೇ ಗಾಂಧೀಜಿ ಪರಿಕಲ್ಪನೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಹೆಚ್ಚು ಶಿಸ್ತುಬದ್ಧರಾಗಿರಾಗಿರಬೇಕೆಂದು ಗಾಂಧೀಜಿಯವರಿಗೆ ತಿಳಿದಿತ್ತು. ಹೀಗಾಗಿಯೇ ಜನರಿಗೆ ಈ ಬಗೆಗಿನ ಶಿಕ್ಷಣವನ್ನು ನೀಡಲು ಮುಂದಾದರು. ತಮ್ಮ ನಿಯತಕಾಲಿಕೆಗಳಾದ ಯಂಗ್ ಇಂಡಿಯಾ, ಹರಿಜನ್ ಹಾಗೂ ನವಜೀವನ್ ಮೂಲಕ ಜನರಿಗೆ ಸತ್ಯಾಗ್ರಹ ಹಾಗೂ ಅಹಿಂಸಾ ಮಾರ್ಗದ ಹೋರಾಟವನ್ನು ಬೋಧಿಸಿದರು.
ಗಾಂಧೀಜಿಯವರಿಗೆ ವಿಶ್ವದಾದ್ಯಂತ ಸಾವಿರಾರು ಅಭಿಮಾನಿಗಳು ಹಾಗೂ ಅನುಯಾಯಿಗಳಿದ್ದಾರೆ. ಅವರ ಜೀವನ, ತತ್ವ-ಸಿದ್ಧಾಂತಗಳು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಇರುವ ಹಲವು ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ. ಇವರಲ್ಲಿ ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಅಧ್ಯಕ್ಷನಾಗಿದ್ದ ನೆಲ್ಸನ್ ಮಂಡೇಲಾ ಹಾಗೂ ಅಮೆರಿಕಾದ ಮಾರ್ಟಿನ್ ಲೂಥರ್ ಕಿಂಗ್ ಪ್ರಮುಖರಾಗಿದ್ದಾರೆ.