ಮುಂಬೈ:ಗೋವಾ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೀಡಿರುವ ಹೇಳಿಕೆಯೊಂದು ಇಡೀ ದೇಶವನ್ನೇ ನಿಬ್ಬೆರಗಾಗಿಸಿದೆ. ಆ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಗುರಿಯಾಗಿದೆ. ಶಿವಸೇನಾ ಕೂಡ ತೀಕ್ಷ್ಣವಾಗಿ ತಿರುಗೇಟು ನೀಡಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಪಾಲರಾಗಿ ನೇಮಕಗೊಳ್ಳುವವರು ಮದ್ಯಪಾನ ಮಾಡುತ್ತಾ ಮತ್ತು ಗಾಲ್ಫ್ ಆಡುತ್ತಾ ದಿನ ಕಳೆಯುತ್ತಾರೆ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಸೇನಾ, 'ಸಂವಿಧಾನದ ಪ್ರತಿಷ್ಠಿತ ಹುದ್ದೆಗೆ ಅಗೌರವ ತಂದಿರುವುದು ಸರಿಯಲ್ಲ' ಎಂದಿದೆ.
ಸತ್ಯಪಾಲ್ ಮಲ್ಲಿಕ್ ಅವರು ನೀಡಿರುವ ಹೇಳಿಕೆ ರಾಜಭವನದ ಪ್ರತಿಷ್ಠೆಗೆ ಕಳಂಕ ತರುತ್ತದೆ. ಕುಡಿಯಲು ಮತ್ತು ಆಟವಾಡಲು ರಾಜಭವನ ಒಂದು ಅಡ್ಡ ಎಂಬಂತೆ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಜಮ್ಮು ಮತ್ತು ಕಾಶ್ಮೀರಕ್ಕೂ ಅವಮಾನ ಮಾಡಿದ್ದಾರೆ ಎಂದು ಶಿವಸೇನೆ ಜರಿದಿದೆ.
ಸತ್ಯಪಾಲ್ ಮಲ್ಲಿಕ್ ಅವರೇ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿಗತಿ, ಅನುಭವಗಳ ಬಗ್ಗೆ ಅವರೇ ತೀಕ್ಷ್ಣವಾಗಿ ಮಾತನಾಡಿರುವುದು ಆಶ್ಚರ್ಯ ತರಿಸಿದೆ. ಅವರು ಕೊಟ್ಟ ಹೇಳಿಕೆಯೇ ಅವರು ಏನೂ ಕೆಲಸ ಮಾಡುತ್ತಿರಲಿಲ್ಲ ಎಂಬುದನ್ನು ತಿಳಿಸುತ್ತದೆ. ರಾಜ್ಯಪಾಲರಾಗಿದ್ದಾಗ ಜಮ್ಮು-ಕಾಶ್ಮೀರದಲ್ಲಿ ಮತ್ತು ಪ್ರಸ್ತುತ ಕೂಡ ಮದ್ಯ ಸೇವಿಸುತ್ತಲೇ ದಿನ ದೂಡುತ್ತಿದ್ದಾರೆ ಎಂದು ತಿಳಿಯುತ್ತಿದೆ. ದೇಶದ ಎಲ್ಲ ರಾಜ್ಯಪಾಲರು ಈ ಕುರಿತು ಸ್ಪಷ್ಟನೆ ನೀಡಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಭಾನುವಾರ (ಮಾರ್ಚ್-15) ಉತ್ತರ ಪ್ರದೇಶದ ಭಾಗಪತ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮಲ್ಲಿಕ್, ರಾಜ್ಯಪಾಲರಿಗೆ ಯಾವುದೇ ಕೆಲಸವಿಲ್ಲ. ಸಾಮಾನ್ಯವಾಗಿ ಜಮ್ಮು-ಕಾಶ್ಮೀರಕ್ಕೆ ರಾಜ್ಯಪಾಲರಾದವರು ಮದ್ಯ ಸೇವಿಸುತ್ತಾ, ಗಾಲ್ಫ್ ಆಡುತ್ತಾ ಕಾಲ ಕಳೆಯಬಹುದು. ಬೇರೆ ರಾಜ್ಯಗಳ ರಾಜ್ಯಪಾಲರಂತೆ ಯಾವುದೇ ಜಗಳವಿರುವುದಿಲ್ಲ ಎಂದು ಹೇಳಿದ್ದರು.