ಡೆಹರಾಡೂನ್: ಉತ್ತರಾಖಂಡದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಅಲ್ಲಿನ ಸಂಪುಟ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಅವರ ಇಡೀ ಕುಟುಂಬವು ಸೋಂಕಿಗೆ ತುತ್ತಾಗಿದೆ.
ಉತ್ತರಾಖಂಡದಲ್ಲಿ ಸಚಿವರ ಕುಟುಂಬಕ್ಕೆ ಸೋಂಕು: ಸಿಎಂ ಸೇರಿ ಎಲ್ಲಾ ಮಂತ್ರಿಗಳಿಗೂ ಕ್ವಾರಂಟೈನ್ ಸಾಧ್ಯತೆ - ಸಚಿವ ಸತ್ಪಾಲ್ ಮಹರಾಜ್
ಉತ್ತರಾಖಂಡ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಅವರ ಕುಟುಂಬ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಸಿಎಂ ಸೇರಿದಂತೆ ಎಲ್ಲಾ ಸಚಿವರೂ ಕ್ವಾರಂಟೈನ್ ಆಗುವ ಸಾಧ್ಯತೆಯಿದೆ.
ಸತ್ಪಾಲ್ ಮಹಾರಾಜ್ ಅವರ ಪತ್ನಿ ಅಮೃತ ರಾವತ್ ಅವರಿಗೆ ಶನಿವಾರ ಕೊರೊನಾ ಸೋಂಕು ಕಂಡುಬಂದ ನಂತರ ಆರೋಗ್ಯ ಇಲಾಖೆ ಸತ್ಪಾಲ್ ಮಹಾರಾಜ್ ಮತ್ತು ಅವರ ಇಡೀ ಕುಟುಂಬದ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ತೆಗೆದುಕೊಂಡಿದೆ. ಮನೆಯಲ್ಲಿ ಕೆಲಸ ಮಾಡುವ ಜನರ ಮಾದರಿಗಳನ್ನು ಸಹ ಪರೀಕ್ಷೆ ಮಾಡಲಾಗುತ್ತಿದೆ. ಸಚಿವರ ಕುಟುಂಬ ಮತ್ತು 35 ಸಿಬ್ಬಂದಿ ಸೇರಿದಂತೆ 41 ಜನರ ಮಾದರಿಗಳನ್ನು ತೆಗೆದುಕೊಂಡಿತ್ತು. 17 ಜನರಲ್ಲಿ ಸೋಂಕು ಕಂಡುಬಂದಿದೆ.
ಸತ್ಪಾಲ್ ಮಹಾರಾಜ್, ಅವರ ಮಗ ಮತ್ತು ಸೊಸೆಗೂ ಕೊರೊನಾ ತಗುಲಿದೆ. ಮತ್ತೊಬ್ಬ ಮಗನ ವರದಿಯಲ್ಲಿ ಸಂದೇಹವಿದ್ದು ಇನ್ನೊಂದು ಬಾರಿ ಪರೀಕ್ಷೆಗೆ ಕಳಿಸಲಾಗಿದೆ. ಮೇ 29 ರಂದು ನಡೆದ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಸತ್ಪಾಲ್ ಮಹಾರಾಜ್ ಪಾಲ್ಗೊಂಡಿದ್ದರು. ಹೀಗಾಗಿ ಉತ್ತರಾಖಂಡ ಮುಖ್ಯಮಂತ್ರಿ ಸೇರಿದಂತೆ ಎಲ್ಲಾ ಸಚಿವರುಗಳನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡುವ ಸಾಧ್ಯತೆಯಿದೆ.