ಮುಂಬೈ: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಹಿನ್ನೆಲೆ ಶುಭಾಶಯ ತಿಳಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್, ದುರ್ಬಲ ಮನಸ್ಸಿನ ನೆಹರುಗಾಗಿ ವಲ್ಲಭಭಾಯ್ ಪಟೇಲ್ ತಮ್ಮ ಪ್ರಧಾನಿ ಹುದ್ದೆ ತ್ಯಾಗ ಮಾಡಿದರು ಎಂದು ಹೇಳಿದ್ದಾರೆ.
ಪಟೇಲ್ ಅವರ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಂಗನಾ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. "ನೀವು ಇಂದಿನ ಅಖಂಡ ಭಾರತವನ್ನು ನಮಗೆ ನೀಡಿದ ಮಹಾನ್ ವ್ಯಕ್ತಿ. ಆದರೆ ನೀವು ಪ್ರಧಾನ ಮಂತ್ರಿಯಾಗಿ ನಿಮ್ಮ ಸ್ಥಾನವನ್ನು ತ್ಯಾಗ ಮಾಡುವ ಮೂಲಕ ನಿಮ್ಮ ಉತ್ತಮ ನಾಯಕತ್ವ ಮತ್ತು ದೂರದೃಷ್ಟಿಯನ್ನು ನಮ್ಮಿಂದ ದೂರವಿಟ್ಟಿದ್ದೀರಿ. ನಿಮ್ಮ ನಿರ್ಧಾರವನ್ನು ನಾವು ತೀವ್ರವಾಗಿ ವಿಷಾದಿಸುತ್ತೇವೆ" ಎಂದು ನಟಿ ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ "ಇವರು ಭಾರತದ ನಿಜವಾದ ಉಕ್ಕಿನ ಮನುಷ್ಯ. ಗಾಂಧೀಜಿ ಅವರು ನೆಹರೂ ಅವರಂತಹ ದುರ್ಬಲ ಮನಸ್ಸಿನ ವ್ಯಕ್ತಿಯನ್ನು ಪ್ರಧಾನಿಯನ್ನಾಗಿಸಲು ಬಯಸಿದ್ದರು. ನೆಹರೂ ಅವರನ್ನು ಮುಂದಿಟ್ಟುಕೊಂಡು ರಾಷ್ಟ್ರವನ್ನು ನಡೆಸಬಹುದು ಎಂದು ಬಯಸಿದ್ದರು. ಅದು ಒಳ್ಳೆಯ ಯೋಚನೆಯಾಗಿತ್ತು. ಆದರೆ ಗಾಂಧೀಜಿ ಅವರ ಹತ್ಯೆ ಬಳಿಕ ನಡೆದದ್ದು ಮಾತ್ರ ದೊಡ್ಡ ದುರಂತ" ಎಂದು ತಿಳಿಸಿದ್ದಾರೆ.
"ನೆಹರೂ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ ಎಂದು ಭಾವಿಸಿ ಹಾಗೂ ಗಾಂಧಿಯನ್ನು ಮೆಚ್ಚಿಸಲು ಪಟೇಲ್ ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾಗಿ ತಮ್ಮ ಅತ್ಯಂತ ಅರ್ಹ ಮತ್ತು ಚುನಾಯಿತ ಸ್ಥಾನವನ್ನು ತ್ಯಾಗ ಮಾಡಿದರು. ಇದರ ಪರಿಣಾಮ ಸರ್ದಾರ್ ಪಟೇಲ್ರ ಮೇಲೆ ಪ್ರಭಾವ ಬೀರಲಿಲ್ಲ. ಆದರೆ ದಶಕಗಳಿಂದ ರಾಷ್ಟ್ರದ ಮೇಲೆ ಪರಿಣಾಮ ಬೀರಿದೆ" ಎಂದು ಕಂಗನಾ ಆರೋಪ ಮಾಡಿದ್ದಾರೆ.