ಮುಂಬೈ:ಮಹಾರಾಷ್ಟ್ರದಲ್ಲಿಸರ್ಕಾರ ರಚನೆಯಿಂದ ಬಿಜೆಪಿ ಹಿಂದೆ ಸರಿದಿದೆ. ಈ ಹಿನ್ನೆಲೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿರುವ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾತನಾಡಿರುವ ಶಿವಸೇನಾ ನಾಯಕ ಸಂಜಯ್ ರಾವುತ್, ತಮಗೆ ರಾಜ್ಯಪಾಲರು ಇನ್ನಷ್ಟು ಹೆಚ್ಚಿನ ಸಮಯಾವಕಾಶ ನೀಡಿದರೆ ಸರ್ಕಾರ ರಚನೆ ಸುಲಭವಾಗುತ್ತದೆ. ಆದರೆ, ರಾಜ್ಯಪಾಲರು ಈ ಅವಕಾಶ ನೀಡುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಗೆ 72 ಗಂಟೆಗಳ ಕಾಲ ಅವಕಾಶ ನೀಡಿದ್ದ ರಾಜ್ಯಪಾಲರು ನಮಗೆ ಅದಕ್ಕಿಂತ ಕಡಿಮೆ ಅವಧಿ ನೀಡಿದ್ದಾರೆ. ಇದು ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ರೂಪಿಸಿರುವ ಕಾರ್ಯತಂತ್ರ ಎಂದು ದೂರಿದ್ದಾರೆ.
ಈ ನಡುವೆ ಕಾಂಗ್ರೆಸ್ ಮಿತ್ರಪಕ್ಷವಾಗಿ ಶಿವಸೇನೆ ಇಟ್ಟುಕೊಂಡು ಸ್ಪರ್ಧಿಸಬಹುದೇ ಎಂಬ ಪ್ರಶ್ನೆಯನ್ನ ಕಾಂಗ್ರೆಸ್ ಮಾಡಿದೆ. ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಮಹಾರಾಷ್ಟ್ರದಲ್ಲಿ ರಾಜಕೀಯ ಅನಿಶ್ಚಿತತೆ ಉದ್ಭವಿಸಿರುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಮತ್ತು ಮಹಾರಾಷ್ಟ್ರದಲ್ಲಿ ಯಾರು ಯಾರೊಂದಿಗೆ ಹಾಗೂ ಹೇಗೆ ಸರ್ಕಾರ ರಚನೆ ಮಾಡ್ತಾರೆ ಎಂಬುದು ಮುಖ್ಯವಲ್ಲ. ಶಿವಸೇನೆ ಜತೆ ಮುಂಬರುವ ಚುನಾವಣೆಯಲ್ಲಿ ಮೈತ್ರಿ ಸಾಧ್ಯವೇ ಎನ್ನುವುದು ಮುಖ್ಯ ಎಂದು ಸಂಜಯ್ ನಿರುಪಮ್ ಎನ್ಸಿಪಿಯನ್ನ ಕೇಳಿದ್ದಾರೆ.
ಇದರ ಮಧ್ಯೆ ಮಾತನಾಡಿರುವ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ, ಮಹಾರಾಷ್ಟ್ರ ಕಾಂಗ್ರೆಸ್ ನಾಯಕರೊಂದಿಗೆ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಮೀಟಿಂಗ್ ಹಮ್ಮಿಕೊಳ್ಳಲಾಗಿದ್ದು, ಇದಾದ ಬಳಿಕ ನಮ್ಮ ಮುಂದಿನ ನಿರ್ಧಾರ ಏನು ಎಂಬುದರ ಕುರಿತು ತಿಳಿಸಲಿದ್ದೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಎನ್ಸಿಪಿ ಮುಖಂಡ ನವಾಬ್ ಮಲಿಕ್ ಮಾತನಾಡಿದ್ದು, ಕಾಂಗ್ರೆಸ್ ಪಕ್ಷ ಶಿವಸೇನೆಗೆ ಬೆಂಬಲ ನೀಡುವ ಆಸಕ್ತಿ ವ್ಯಕ್ತಪಡಿಸಿದೆ. ಆದರೆ ನಾವು ಕಾಂಗ್ರೆಸ್ ಜತೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿರುವ ಕಾರಣ ಅವರ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.