ಮುಂಬೈ (ಮಹಾರಾಷ್ಟ್ರ):ಶಿವಸೇನೆ ವಕ್ತಾರ ಸಂಜಯ್ ರಾವತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಕುತಂತ್ರ ಇಡೀ ಮಹಾರಾಷ್ಟ್ರದ ಜನರಿಗೆ ತಿಳಿದಿದೆ. ಅಧಿಕಾರಕ್ಕಾಗಿ ಸರ್ಕಾರದ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಎಷ್ಟೇ ತಂತ್ರ ರೂಪಿಸಿ, ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರೂ ಅದು ಸಫಲವಾಗಲ್ಲ. ಕೇಂದ್ರ ಸಂಸ್ಥೆಗಳ ನಡೆಗಳನ್ನು ನಾವು ಮೌನವಾಗಿ ಗಮನಿಸುತ್ತಿದ್ದೇವೆ ಎಂದರು.
ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಮೇಲೆ ಕೇಂದ್ರದ ಒತ್ತಡದ ರಾಜಕಾರಣ ಇದೆ. ಬಿಜೆಪಿ ವಿರುದ್ಧ ನಾವು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದೇವೆ. ಒತ್ತಡದ ಮೂಲಕ ರಾಜಕೀಯ ಮಾಡಲು ಬಯಸಿದರೆ ನಾವು ಅವರನ್ನು ಸ್ವಾಗತಿಸುತ್ತೇವೆ. ಆದರೆ ಅದರಲ್ಲಿ ಪಾರದರ್ಶಕ ರಾಜಕೀಯ ಮಾಡಬೇಕಿದೆ ಎಂದು ಕೇಂದ್ರ ಸರ್ಕಾರಕ್ಕೆ ತಿರುಗೇಟು ನೀಡಿದರು.
ಸ್ವಾತಂತ್ಯ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿ ಇಂತಹ ತಂತ್ರಗಳನ್ನು ಅಳವಡಿಸಿಕೊಂಡು ಜನರನ್ನು ನಿಯಂತ್ರಿಸುತ್ತಿತ್ತು. ಈಗ ಅದೇ ಪುನರಾವರ್ತನೆಯಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಕಾರ್ಟೂನ್ ಬಗ್ಗೆ ರಾವತ್ ಸಮರ್ಥಿಸಿಕೊಂಡಿದ್ದಾರೆ. ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ನಾಯಿಗಳಿಗೆ ಹೋಲಿಸಲಾಗಿದೆ. ಇದು ಈ ದೇಶದ ಜನರ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಒಂದು ಕಾಲದಲ್ಲಿ ಶ್ಲಾಘಿಸಲ್ಪಟ್ಟಿದ್ದ ಈ ಏಜೆನ್ಸಿಗಳನ್ನು ಕೇಂದ್ರ ಸರ್ಕಾರ ಈಗ ವಿಪಕ್ಷಗಳನ್ನು ಹಣಿಯಲು ಬಳಸಿಕೊಳ್ತಿದೆ ಎಂದು ದೂರಿದ್ದಾರೆ.
ನಟಿ ಕಂಗನಾ ರನೌತ್ ಕಚೇರಿ ನೆಲಸಮಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ತೀರ್ಪಿನ ಬಗ್ಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿಗೆ ಸಂಬಂಧಿಸದಂತೆ ಅಕ್ರಮ ಮನೆ ನಿರ್ಮಾಣದ ಬಗ್ಗೆ ಸಂವಿಧಾನದ ಪುಸ್ತಕಗಳನ್ನು ಕೇಳಿದ್ದೇನೆ. ಅಕ್ರಮ ಕಟ್ಟಡ ತೆರವಿನ ಬಗ್ಗೆ ಹೇಗೆ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ ಎಂದರು.