ಅಸ್ಸೋಂ:ಸರ್ವಧರ್ಮ ಸಹಿಷ್ಣುತೆ ಭಾರತದ ಭದ್ರ ಬುನಾದಿ. ಸರ್ವರೊಂದೇ ಎನ್ನುವ ಭಾವ ನಮ್ಮ ದೇಶದ ಜೀವನಾಡಿ. ಅದಕ್ಕೆ ನೈಜ ಉದಾಹರಣೆ ಅಸ್ಸೋಂನ ಗೋಲಾಘಾಟ್ ಜಿಲ್ಲೆಯ ಸಹನೂರ್ ಬೇಗಂ. ಕಳೆದ 35 ವರ್ಷಗಳಿಂದ ಹಿಂದೂಗಳ ಶವಾಗಾರವನ್ನು ಸ್ವಚ್ಛಗೊಳಿಸುತ್ತಿರುವ ಇವರು ಮಾನವ ಧರ್ಮ ದೊಡ್ಡದೆಂದು ಸಾರುತ್ತಿದ್ದಾರೆ.
ಸಹನೂರು ಬೇಗಂ ಬೆಳಗಿನ ನಮಾಜ್ ಮುಗಿಸಿದ ಬಳಿಕ ಪ್ರತಿದಿನ ಪೊರಕೆ ಹಾಗೂ ಬಿದಿರಿನ ಬುಟ್ಟಿ ಹಿಡಿದು ಟೆನ್ಪುರದ ಶಾಂತಿಬಾನ್ ಶವಾಗಾರಕ್ಕೆ ಕೆಲಸಕ್ಕೆ ಹೋಗ್ತಾರೆ. ಸ್ಮಶಾನದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುತ್ತಾರೆ. ಕಳೆದ 35 ವರ್ಷಗಳಿಂದ ಇವರ ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಹಿಂದೂ ಸ್ಮಶಾನ ಸ್ವಚ್ಛಗೊಳಿಸುವ ಮುಸ್ಲಿಂ ಮಹಿಳೆ ಕಳೆದ ಮೂರು ದಶಕಗಳಲ್ಲಿ ಸಹನೂರ್ ಸ್ಮಶಾನದೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿದ್ದಾರೆ. ಸ್ಮಶಾನವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲದೆ ಸತ್ತವರ ಅಂತ್ಯಕ್ರಿಯೆಗಾಗಿ ಬರುವ ಜನರಿಗೆ ಸಹಾಯಹಸ್ತವನ್ನೂ ಇವರು ಚಾಚಬಲ್ಲರು. ಮಾವಿನ ಹಣ್ಣು, ಬಾಳೆ, ಪೇರಲ ಮತ್ತು ಬಿದಿರು ಸೇರಿದಂತೆ ಅನೇಕ ಗಿಡಗಳನ್ನು ಸ್ಮಶಾನದಲ್ಲಿ ನೆಟ್ಟಿದ್ದಾರೆ.
ಸಹನೂರ್‌ಗೆ ಎಲ್ಲಾ ಧರ್ಮಗಳು ಒಂದೇ ಎನ್ನುವ ಮನೋಭಾವವಿದೆ. ತಮ್ಮ ಸೇವೆಗಾಗಿ ಅವರು ಯಾವುದೇ ಗೌರವವನ್ನು ನಿರೀಕ್ಷಿಸಿಲ್ಲ. ವಿವಿಧ ವರ್ಗದ ಜನರು ಅವರ ಕೆಲಸವನ್ನು ಮೆಚ್ಚಿದ್ದು, ಕಳೆದ ವರ್ಷ ಜನವರಿ 26ರಂದು ಜಿಲ್ಲಾಡಳಿತವು ಅವರಿಗೆ ಸನ್ಮಾನ ಮಾಡಿತ್ತು. ಸಹನೂರ್ ಅವರು ಸಮಾಜದಲ್ಲಿ ಏಕತೆ ಮತ್ತು ಮಾನವೀಯತೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ.