ನವದೆಹಲಿ:ಬಂಡಾಯ ಎದ್ದು ರಾಜಸ್ಥಾನ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಸಚಿನ್ ಪೈಲಟ್, ತಾವು ಬಿಜೆಪಿ ಸೇರವುದಿಲ್ಲ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಬಿಜೆಪಿಗೆ ಸೇರುತ್ತಿಲ್ಲ. ಬಿಜೆಪಿಗೆ ಸೇರುವ ಯಾವುದೇ ಯೋಚನೆ ಮಾಡಿಲ್ಲ. ಬಿಜೆಪಿ ಜೊತೆ ಸಂಬಂಧ ಕಲ್ಪಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹಾಗೂ ಡಿಸಿಎಂ ಸ್ಥಾನದಿಂದ ವಜಾ ಮಾಡಿದ ಒಂದು ದಿನದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿನ್ ಪೈಲಟ್, ನಾನು ಇನ್ನೂ ಕಾಂಗ್ರೆಸ್ ಪಕ್ಷದ ಸದಸ್ಯನಾಗಿದ್ದಾನೆ. ಭವಿಷ್ಯದ ಯೋಜನೆ ಬಗ್ಗೆ ಇನ್ನೂ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ನಾನು ರಾಜಸ್ಥಾನದ ಜನರ ಸೇವೆ ಮಾಡಲು ಬಯಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
30 ಜನ ಶಾಸಕರು ಸಚಿನ್ ಪೈಲಟ್ ಬೆಂಬಲಕ್ಕೆ ಇದ್ದಾರೆ ಎನ್ನಲಾಗಿತ್ತು. ಆದರೆ ನಿನ್ನೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 18 ಮಂದಿ ಮಾತ್ರ ಗೈರಾಗಿದ್ದಾರೆ. ಈ ಮೂಲಕ ಸಚಿನ್ ಬೆಂಬಲಕ್ಕೆ 18 ಜನ ಶಾಸಕರಿದ್ದಾರೆ ಎಂದು ಗೊತ್ತಾಗಿದೆ. ಈಗ ಎರಡೂ ಬಣದ ಶಾಸಕರು ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಅತ್ತ ಕಾಂಗ್ರೆಸ್ನ ಹೈಕಮಾಂಡ್ ನಾಯಕರು ಬಂಡೆದ್ದಿರುವ ಸಚಿನ್ ಪೈಲಟ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.