ತಿರುವನಂತಪುರಂ(ಕೇರಳ): ಅಯ್ಯಪ್ಪ ಭಕ್ತರಿಗಾಗಿ 75 ದಿನಗಳ ನಂತರ ಶಬರಿಮಲೆ ದೇವಸ್ಥಾನವನ್ನು ಜೂನ್ 14 ರಂದು ತೆರೆಯಲು ನಿರ್ಧರಿಸಲಾಗಿದೆ. ಭಕ್ತರು ಸರತಿ ಸಾಲಿನ ಮೂಲಕ ದರ್ಶನ ಪಡೆಯಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೋವಿಡ್ ಮಾರ್ಗಸೂಚಿಗಳನ್ನು ದೇಗುಲದ ಆವರಣದಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ಶಬರಿಮಲೆ ದೇವಸ್ವಂ ಮಂಡಳಿ ಶಬರಿಮಲೆ ಅಯ್ಯಪ್ಪ ದೇವಾಲಯದಂತಹ ಪ್ರಮುಖ ದೇವಾಲಯಗಳಲ್ಲಿ ಮುಂಗಡ ಕಾಯ್ದಿರಿಸುವ ಮೂಲಕ ಭಕ್ತರಿಗೆ ದರ್ಶನ ಭಾಗ್ಯವನ್ನು ಕಲ್ಪಿಸಲಾಗಿದೆ. ದೇಗುಲಕ್ಕೆ ಬರುವ ಇತರ ರಾಜ್ಯದ ಯಾತ್ರಾರ್ಥಿಗಳು ಕೋವಿಡ್-19 ಪ್ರಮಾಣ ಪತ್ರವನ್ನು ಪಡೆಯಬೇಕಿದೆ.
ಇತಿಹಾಸ ಪ್ರಸಿದ್ಧ ದೇವಾಲಯವನ್ನು ಮಿಥುನ ಮಾಸದ ಪೂಜೆ ಮತ್ತು ದೇವಾಲಯದ ಉತ್ಸವಕ್ಕಾಗಿ ತೆರೆಯಬೇಕಾಗಿದೆ. ದೇವಾಲಯದಲ್ಲಿ ಒಮ್ಮೆಗೆ ಗರಿಷ್ಠ 200 ಜನರಿಗೆ ದರ್ಶನ ನೀಡಲು ಅವಕಾಶವಿರುತ್ತದೆ ಮತ್ತು ಗರ್ಭಗುಡಿಯ ಬಳಿ ಕೇವಲ 50 ಜನರು ಮಾತ್ರ ಪ್ರವೇಶಿಸಬಹುದಾಗಿದೆ. ಈ ವೇಳೆ 5 ಜನರ ಸಣ್ಣ ಗುಂಪುಗಳನ್ನು ದೇವರ ದರ್ಶನಕ್ಕಾಗಿ ಅನುಮತಿಸಲಾಗುತ್ತದೆ.
ದರ್ಶನದ ಸಮಯ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 11 ರವರೆಗೆ ಇರುತ್ತದೆ. ದೇವಾಲಯದ ಪ್ರವೇಶವನ್ನು ಪಂಬಾ ಮೂಲಕ ಮಾತ್ರ ಅನುಮತಿಸಲಾಗುತ್ತದೆ ಮತ್ತು ಇತರ ಎಲ್ಲಾ ಪ್ರವೇಶ ಕೇಂದ್ರಗಳು ಮುಚ್ಚಲ್ಪಡುತ್ತವೆ.
ದೇವಾಲಯದಲ್ಲಿ ದರ್ಶನಕ್ಕಾಗಿ ಇತರ ರಾಜ್ಯಗಳಿಂದ ಬರುವ ಭಕ್ತರು ಕೇರಳ ಸರ್ಕಾರದ ಇ-ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಹೀಗೆ ನೋಂದಾಯಿಸುವಾಗ ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದಿತ ಪ್ರಯೋಗಾಲಯದಿಂದ ಕೋವಿಡ್-19 ನಕಾರಾತ್ಮಕ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬೇಕು. ರಾಜ್ಯದ ಕೋವಿಡ್-19 ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಅನುಸರಿಸಿ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.
ಅಪ್ಪಂ ಮತ್ತು ಅರವಾಣ ಪ್ರಸಾದವನ್ನು ಪಡೆಯಲು ಆನ್‌ಲೈನ್ ಬುಕಿಂಗ್ ಮಾಡಬೇಕು. ಅಭಿಷೇಕಕ್ಕೆ ತುಪ್ಪ ಅರ್ಪಿಸುವ ಭಕ್ತರು ಅಭಿಷೇಕದ ನಂತರ ಕೌಂಟರ್‌ನಿಂದ ತುಪ್ಪ ಪಡೆಯಬಹುದು. 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧ ಅರ್ಚಕರಿಗೆ ದರ್ಶನ ನಿರಾಕರಿಸುವ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಇನ್ನು ಕೆಎಸ್‌ಆರ್‌ಟಿಸಿ ಬಸ್‌ಗಳು ಪಂಬಾ ತನಕ ಚಲಿಸುತ್ತವೆ. ಹಾಗೆಯೇ ಭಕ್ತರು ಪಂಬಾವರೆಗೆ ಖಾಸಗಿ ವಾಹನಗಳಲ್ಲಿಯೂ ತಲುಪಬಹುದು. ಮುಂದಿನ ವಾರ ಮಾಸಿಕ ಪೂಜೆ ಮತ್ತು ನಂತರದ ವಿಶೇಷ ಆಚರಣೆಗಳ ನಂತರ ಜೂನ್ 28 ರಂದು ದೇವಾಲಯವನ್ನು ಮುಚ್ಚಲಾಗುವುದು ಎಂದು ಭಕ್ತರ ಗಮನಕ್ಕೆ ದೇಗುಲ ತಿಳಿಸಿದೆ.