ನವದೆಹಲಿ:ಅಂತಾರಾಷ್ಟ್ರೀಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಭಾರತೀಯ ಕುಲಭೂಷಣ್ ಜಾಧವ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಪಾಕ್ಗೆ ಒತ್ತಾಯಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್.ಜೈಶಂಕರ್ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಕುಲಭೂಷಣ್ ಕುರಿತು ಮಾತನಾಡಿದ ಅವರು, ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಕೇವಲ ಭಾರತ ಮಾತ್ರವಲ್ಲ, ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳಿಗೆ ಗೌರವ ಕೊಡುವ ಎಲ್ಲರಿಗೂ ದೊರೆತ ಸಮರ್ಥನೆಯಾಗಿದೆ ಎಂದಿದ್ದಾರೆ.
ಜಾಧವ್ ವಿರುದ್ಧ ಪಾಕಿಸ್ತಾನ ಮಾಡಿರುವ ಎಲ್ಲ ಆರೋಪಗಳು ಸುಳ್ಳಾಗಿವೆ. ಜಾಧವ್ ನಿರಪರಾಧಿ. ಯಾವುದೇ ಕಾನೂನಿನ ಪ್ರಾತಿನಿಧಿತ್ವವಿಲ್ಲದೆ ಅವರನ್ನು ಬಲವಂತವಾಗಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿದೆ ಎಂದು ಪಾಕ್ ನಡೆ ಟೀಕಿಸಿದರು.
ಪಾಕಿಸ್ತಾನ ಕುಲಭೂಷಣ್ ಜಾಧವ್ ಅವರ ಜೊತೆಗೆ ಸಂಪರ್ಕ ಹೊಂದಲು ಭಾರತಕ್ಕೆ ಅವಕಾಶ ಮಾಡಿಕೊಡದ ಮೂಲಕ ವಿಯೆನ್ನಾ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ ಎಂದು ಸಚಿವ ಜೈಶಂಕರ್ ರಾಜ್ಯಸಭೆಯ ಗಮನಕ್ಕೆ ತಂದರು.