ಅಹಮದಾಬಾದ್: ಎಂಜಿನಿಯರಿಂಗ್ ಸೇರ್ಪಡೆಯ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಅನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲದೇ ಗುಜರಾತಿ ಭಾಷೆಯಲ್ಲಿ 'ಮಾತ್ರ' ನಡೆಸಲಾಗುತ್ತಿದೆ ಎಂಬುವುದರ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಬ್ಯಾನರ್ಜಿ ಅವರನ್ನು"ಡಿವೈಡರ್ ದೀದಿ" ಎಂದು ಕರೆದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಎತ್ತಿದ ಆಕ್ಷೇಪಣೆಯ ಬಗ್ಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊರಡಿಸಿದ ಸ್ಪಷ್ಟೀಕರಣದ ಲಿಂಕ್ ಅನ್ನು ಸಹ ತಮ್ಮ ಟ್ವಿಟ್ಟರ್ನಲ್ಲಿ ತೆಗೆದುಕೊಂಡು ರೂಪಾನಿ ಪೋಸ್ಟ್ ಮಾಡಿದ್ದಾರೆ.
ಬ್ಯಾನರ್ಜಿ ಅವರ ಸರಣಿ ಟ್ವೀಟ್‌ಗಳ ಮುಖೇನ ಇಂಗ್ಲಿಷ್ ಮತ್ತು ಹಿಂದಿಯನ್ನು ಹೊರತುಪಡಿಸಿ ಗುಜರಾತಿನಲ್ಲಿ ಮಾತ್ರ ಜೆಇಇ ನಡೆಸುವ ಮೂಲಕ ಇತರ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯ ಏಕೆ ಎಂದು ಪ್ರಶ್ನಿಸಿದ್ದರು. ಗುಜರಾತಿ ಇರಬೇಕಾದರೆ, ಎಲ್ಲ ಪ್ರಾದೇಶಿಕ ಭಾಷೆಗಳು ಹಾಗೂ ಬಂಗಾಳಿ ಸೇರಿಸಬೇಕು ಎಂದಿದ್ದರು.
ಆತ್ಮೀಯ #DividerDidi, ನಿಮ್ಮ ರಾಜ್ಯದ ಜನರಿಗೆ ಅಭಿವೃದ್ಧಿಯ ಅಗತ್ಯವಿಲ್ಲದಂತಹ ವಿಭಜಕ ಸಾಹಸಗಳು ಇವು. ಈಗ ಸತ್ಯ ಹೊರಬಿದ್ದಿದ್ದು, ನಿಮ್ಮ ಸುಳ್ಳಿಗೆ ನೀವು ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ರೂಪಾನಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹೊರಡಿಸಿದ ಸ್ಪಷ್ಟೀಕರಣದ ಲಿಂಕ್ ಅನ್ನು ಜೋಡಿಸಿ ಟ್ವೀಟ್ ಮಾಡಿದ್ದಾರೆ.