ಬಾರ್ಮರ್: ಗುರಿ ಮತ್ತು ಸಾಧಿಸುವ ಛಲ ಇದ್ದರೆ, ಸಾಧನೆಗೆ ನೂರಾರು ದಾರಿಗಳು ಹುಟ್ಟಿಕೊಳ್ಳುತ್ತವೆ ಎಂಬುದಕ್ಕೆ ಸಾಕ್ಷಿ ಈ ರುಮಾ ದೇವಿ. ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿರುವ ರುಮಾ ದೇವಿ, ಹೆಚ್ಚು ವಿದ್ಯಾವಂತರಲ್ಲ. ಆದರೆ, ಕಸೂತಿ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.
ಕಸೂತಿ ಕಲೆಯಿಂದ ಸಾಧನ ಮಾಡಿದ ಕಲಾವಿದೆ ಬಾರ್ಮರ್‌ನ ಚಿಕ್ಕ ಗ್ರಾಮದ ರುಮಾ ದೇವಿ ಪ್ರಸಿದ್ಧ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಿದರು. ಅಂದು ಜೀವನೋಪಾಯಕ್ಕಾಗಿ ಕಸೂತಿ ವಿದ್ಯೆ ಕರಗತ ಮಾಡಿಕೊಂಡ ರುಮಾ ದೇವಿ ಇಂದು ಫ್ಯಾಷನ್ ಶೋಗಳಲ್ಲಿ ಕೆಲಸ ಮಾಡುತ್ತಾರೆ.
ರುಮಾ ದೇವಿ 1988 ರಲ್ಲಿ ಬಾರ್ಮರ್‌ನ ರಾವತ್ಸರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಕೇವಲ ನಾಲ್ಕು ವರ್ಷದವಳಿದ್ದಾಗ, ತಾಯಿಯನ್ನು ಕಳೆದುಕೊಂಡಳು. ಅವರು ಕೇವಲ 8 ನೇ ತರಗತಿಯವರೆಗೆ ಶಿಕ್ಷಣ ಪಡೆದರು. ಬಳಿಕ ಶಾಲೆ ಬಿಡಿಸಿ ಮದುವೆ ಮಾಡಲಾಯಿತು. ಪತಿ ಮನೆಯಲ್ಲಿ ಆರ್ಥಿಕ ಸ್ಥಿತಿಯು ಸರಿಯಾಗಿರದ ಕಾರಣದಿಂದಾಗಿ, ವೈದ್ಯಕೀಯ ಆರೈಕೆ ಕೊರತೆಯಿಂದ ರುಮಾ ದೇವಿಯ ಎರಡು ದಿನಗಳ ಮಗು ಸಾವನ್ನಪ್ಪಿತು. ಬಳಿಕ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ನಿರ್ಧರಿಸಿದರು. ಇಲ್ಲಿಯವರೆಗೆ, ಅವರು 22 ಸಾವಿರ ಮಹಿಳೆಯರಿಗೆ ಉದ್ಯೋಗ ಒದಗಿಸಿದ್ದಾರೆ.
ಕಳೆದ ವರ್ಷ ರುಮಾ ದೇವಿಗೆ ನಾರಿ ಶಕ್ತಿ ಪುರಸ್ಕರ ನೀಡಿ ಗೌರವಿಸಲಾಗಿದೆ. ರುಮಾ ದೇವಿ ಈವರೆಗೆ ಹತ್ತು ಹಲವು ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ರುಮಾ ದೇವಿ ಈಗ ಪ್ರಮುಖ ಶಕ್ತಿಯಾಗಿ ಕಾಣುತ್ತಿದ್ದಾರೆ. ಛಲ, ಧೈರ್ಯ ಜತೆಗೆ ಕೌಶಲ್ಯವಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ರುಮಾ ದೇವಿ ಸಾಧಿಸಿ ತೋರಿಸಿದ್ದಾರೆ.