ನವದೆಹಲಿ: ಪ್ರತಿ ಮಗುವಿಗೂ ಶೈಕ್ಷಣಿಕ ಭದ್ರತೆ ಒದಗಿಸುವ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್ಟಿಇ) ತಿದ್ದುಪಡಿ ತಂದಿದ್ದ ಈ ಹಿಂದಿನ ಮೈತ್ರಿ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದಲ್ಲಿ ಆರ್ಟಿಇ ಕಾಯ್ದೆಯ ನಿಯಮ-4 ರಲ್ಲಿ ಬದಲಾವಣೆ ಮಾಡಲಾಗಿತ್ತು. ಇದರಿಂದಾಗಿ ಸಾವಿರಾರು ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ ಎಂದು ಆರೋಪಿಸಿ ಆರ್ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘವು ಹೈ ಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅಲ್ಲಿ ಅರ್ಜಿ ವಜಾಗೊಂಡಿದ್ದ ಕಾರಣ ಸುಪ್ರೀಂ ಕೋರ್ಟ್ಗೆ ವಿಶೇಷ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಪರಿಶೀಲಿಸಿರುವ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ತಿದ್ದುಪಡಿಯಾಗಿದ್ದ ನಿಯಮ ಏನು?
ದೋಸ್ತಿ ಸರ್ಕಾರದ ಆಡಳಿತಾವಧಿಯಲ್ಲಿ ಆರ್ಟಿಇ ನಿಯಮಾವಳಿ-4 ನ್ನು ತಿದ್ದುಪಡಿ ಮಾಡಲಾಗಿತ್ತು. ಅದರ ಪ್ರಕಾರ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾತಿ ನೀಡಿದ ನಂತರ ಸುತ್ತಮುತ್ತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದಿದ್ದರೆ ಮಾತ್ರ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಆರ್ ಟಿಇಯಡಿ ಪ್ರವೇಶಾತಿ ನೀಡಲಾಗುತ್ತಿತ್ತು.
ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಅರ್ಜಿದಾರರು ಏನು ಹೇಳುತ್ತಾರೆ?
ಆರ್ಟಿಇ ನಿಯಮ-4 ರ ಬದಲಾವಣೆಯಿಂದಾಗಿ ಖಾಸಗಿ ಶಾಲೆಗಳಲ್ಲಿ ಓದ ಬಯಸಿದ್ದ ಬಡತನ ರೇಖೆಯ ಕೆಳಗಿರುವ ಮಕ್ಕಳಿಗೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೆವು. ಅರ್ಜಿ ವಜಾಗೊಂಡಿದ್ದರಿಂದ ಸುಪ್ರೀಂ ಕೋರ್ಟ್ಗೆ ವಿಶೇಷ ಅರ್ಜಿ ಸಲ್ಲಿಸಲಾಗಿತ್ತು. ಇಂದಿನಿಂದ ವಿಚಾರಣೆ ಆರಂಭಗೊಂಡಿದೆ. ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ ಎಂದು ಅರ್ಜಿದಾರ, ಆರ್ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್. ಯೋಗಾನಂದ ತಿಳಿಸಿದ್ದಾರೆ.