ನವದೆಹಲಿ: ದೆಹಲಿ ಹಿಂಸಾಚಾರ ವಿಚಾರ ಸಂಬಂಧ ರಾಜ್ಯಸಭೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು, ಅಧಿವೇಶನವನ್ನ ಬುಧವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.
ದೆಹಲಿ ಹಿಂಸಾಚಾರ ವಿಚಾರ ಚರ್ಚಿಸಲು ಸರ್ಕಾರ ಒಪ್ಪಿಗೆ: ರಾಜ್ಯಸಭೆ ಅಧಿವೇಶನ ನಾಳೆಗೆ ಮುಂದೂಡಿಕೆ - ರಾಜ್ಯಸಭೆ ಅಧಿವೇಶನ ನಾಳೆಗೆ ಮುಂದೂಡಿಕೆ
ದೆಹಲಿ ಹಿಂಸಾಚಾರ ಸಂಬಂಧ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ನಿಗದಿಪಡಿಸಿದ ಸಮಯದಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಸದನದ ನಾಯಕ ತಾವರ್ ಚಂದ್ ಗೆಹ್ಲೋಟ್ ತಿಳಿಸಿದ್ದು, ಅಧಿವೇಶನವನ್ನು ಬುಧವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.
ಇಂದು ಬೆಳಗ್ಗೆ ಎರಡು ಬಾರಿ ಮುಂದೂಡಿಕೆಯಾಗಿ ಮತ್ತೆ ಮಧ್ಯಾಹ್ನ 3 ಗಂಟೆಗೆ ಅಧಿವೇಶನ ಪ್ರಾರಂಭವಾಗಿತ್ತು. ಆದರೆ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದ್ದರೂ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಇದರಿಂದ ಕೋಪಗೊಂಡ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್, ಹಿಂಸಾಚಾರದಲ್ಲಿ ಬಲಿಯಾದ 47 ಮಂದಿಯಲ್ಲಿ ಶೇ.90 ರಷ್ಟು ಜನರು 24-35 ವರ್ಷ ವಯಸ್ಸಿನವರು. ಇದು ನಮ್ಮ ದೇಶಕ್ಕೆ ಅಪಾರ ನಷ್ಟ. ಈ ಕುರಿತು ಇಡೀ ಜಗತ್ತೇ ಮಾತನಾಡುತ್ತಿರುವಾಗ ಸಂಸತ್ತೇ ಇದನ್ನು ಚರ್ಚಿಸದಿರುವುದು ವಿಚಿತ್ರವೆನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸದನದ ನಾಯಕ ಥಾವರ್ ಚಂದ್ ಗೆಹ್ಲೋಟ್, ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ನಿಗದಿ ಪಡಿಸಿದ ಸಮಯದಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದು, ಅಧಿವೇಶನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಗಿದೆ.