ಇಡುಕಿ:ನೆಡುಂಕಂಡಂ ಮೂಲದ ಅನಂತು ಎಂಬ ಯುವಕ ಈ ವರ್ಷದ ಕೇರಳ ಲಾಟರಿ ಓಣಂ ಬಂಪರ್‌ನಲ್ಲಿ 12 ಕೋಟಿ ರೂಪಾಯಿ ಗೆದ್ದುಕೊಂಡಿದ್ದಾನೆ.
ಅನಂತು ಪ್ರಸ್ತುತ ಎರ್ನಾಕುಲಂನಲ್ಲಿ ಎಲಂಕುಲಂ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹಣಕಾಸಿನ ತೊಂದರೆಯಿಂದಾಗಿ ಈ ಹಿಂದೆ ಎಂಬಿಎ ಕನಸುನ್ನು ಕೈಬಿಟ್ಟಿದ್ದರು. ಅಲ್ಲದೆ ಅವರು ವಾಸಿಸುವ ಮನೆ ಶಿಥಿಲಾವಸ್ಥೆ ತಲುಪಿದ್ದು, ಮಳೆ ಬಂದರೆ ಮನೆ ಸೋರುತ್ತದೆ. ಇಂತಹ ಕಷ್ಟದ ಜೀವನ ಕಳೆಯುತ್ತಿದ್ದವನಿಗೆ ಬಂಪರ್ ಲಾಟರಿ ಹೊಡೆದಿದೆ.
ಕೇರಳದ ಯುವಕನಿಗೆ 12 ಕೋಟಿ ರೂ. ಬಂಪರ್ ಲಾಟರಿ ಅವರ ತಂದೆ ವಿಜಯನ್ ಪೇಂಟಿಂಗ್ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ತಾಯಿ ಸುಮಾ ಖಾಸಗಿ ಜವಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿ ತಮ್ಮ ಅಲ್ಪ ಆದಾಯದಲ್ಲೇ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸಿದ್ದರು. ಅನಂತು ಸಹೋದರ ಅರವಿಂದ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಹಿರಿಯ ಸಹೋದರಿ ಅತಿರಾ ಮನೆಯಲ್ಲಿದ್ದರು. ಕೋವಿಡ್-19 ಕಾರಣದಿಂದಾಗಿ ಕೆಲಸ ಕಳೆದುಕೊಂಡಿದ್ದರಿಂದ ತಮ್ಮ ತೋಟದಲ್ಲಿ ತರಕಾರಿಗಳನ್ನು ಬೆಳೆಯುತ್ತಿದ್ದಾರೆ.
ಕಷ್ಟದಲ್ಲೇ ಜೀವನ ಕಳೆದ ಈ ಕುಟುಂಬ ಸರಿಯಾದ ರಸ್ತೆ ಸಂಪರ್ಕ ಮತ್ತು ನೀರಿನ ಸಂಪರ್ಕ ಇರುವೆಡೆ ಭೂಮಿ ಖರೀದಿಸಿ ಮನೆ ನಿರ್ಮಿಸುವ ಕನಸು ಹೊಂದಿದೆ. ಅಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗಕ್ಕೆ ಕಳುಹಿಸಲು ಮತ್ತು ಮಗಳ ಮದೆವು ಮಾಡಲು ಹಣವನ್ನು ಬಳಸುವುದಾಗಿ ಹೇಳಿದ್ದಾರೆ.