ತಿರುಪತಿ (ಆಂಧ್ರಪ್ರದೇಶ):ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಕರ್ನಾಟಕ ಭವನ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೆರವೇರಿಸಿದರು ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಟ್ಟದ ಮೇಲೆ ಕರ್ನಾಟಕಕ್ಕೆ ಸೇರಿರುವ 6.67 ಎಕರೆ ಪ್ರದೇಶದಲ್ಲಿ ಈ ವಸತಿ ಗೃಹ ನಿರ್ಮಾಣವಾಗಲಿದ್ದು, ತಿರುಪತಿಯಲ್ಲಿ ಕರ್ನಾಟಕದ ಭಕ್ತರಿಗೆ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ಈ ಭವನ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ತಿರುಮಲದಲ್ಲಿ ಭಕ್ತರಿಗಾಗಿ ತಲೆ ಎತ್ತಲಿವೆ ಸಂಪಿಗೆ, ಸೇವಂತಿಗೆ, ತಾವರೆ, ಮಲ್ಲಿಗೆ ಕಟ್ಟಡಗಳು 3 ಲಕ್ಷ ಚದರ ಅಡಿ ಜಾಗದಲ್ಲಿ ಸಂಪಿಗೆ, ಸೇವಂತಿಗೆ, ತಾವರೆ ಮತ್ತು ಮಲ್ಲಿಗೆ ಹೆಸರಿನ ನಾಲ್ಕು ಭವ್ಯ ಕಟ್ಟಡಗಳು ತಲೆ ಎತ್ತಲಿವೆ. ಈ ನಾಲ್ಕು ಹೊಸ ಕಟ್ಟಡಗಳ ನಿರ್ಮಾಣ ಹೊಣೆಯನ್ನು ಟಿಟಿಡಿ ವಹಿಸಿಕೊಂಡಿದೆ. ಈ ಹಿಂದೆ ಇದ್ದ ಕನಕಾಂಬರ ಎಂಬ ಹೆಸರಿನ ಕಟ್ಟಡವನ್ನು ನವೀಕರಣ ಮಾಡಲಾಗುತ್ತದೆ. 1964ರಲ್ಲಿ ನ್ಯೂ ಮೈಸೂರು ಚೌಲ್ಟ್ರಿಗೆ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾದ ಬಳಿಕ ಸಿಎಂ ಯಡಿಯೂರಪ್ಪ ಮತ್ತು ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಕರ್ನಾಟಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿದ್ದು ವಿಶೇಷವಾಗಿದೆ ಎಂದರು.
ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಭಕ್ತರು ತೆರಳುತ್ತಾರೆ. ಆದರೆ ಎಲ್ಲರಿಗೂ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳಲು ಕೊಠಡಿಗಳು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಭಕ್ತರಿಗೆ ಕರ್ನಾಟಕ ಭವನದಲ್ಲೇ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.
ಈ ಕಟ್ಟಡದಿಂದ ಭಕ್ತರು ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ಕಾಲ್ನಡಿಗೆಯಲ್ಲೇ ಹೋಗಬಹುದಾಗಿದೆ. ವೆಸ್ಟ್ ಮದ್ರಾಸ್ ಸ್ಟ್ರೀಟ್ನಲ್ಲಿ ಮೈಸೂರು ಮಹಾರಾಜರು ಅಲ್ಲಿಂದ ಬ್ರಹ್ಮೋತ್ಸವನ್ನು ನೋಡುತ್ತಿದ್ದರು. ಈ ಒಂದು ಯೋಜನೆ ಎರಡ್ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಬಹುದು ಎಂದು ನಾವು ನಿರೀಕ್ಷಿಸುತ್ತೇವೆ ಅಂತಾ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.