ವಡೋದರ:ಬೇಸಿಗೆಯಲ್ಲಿ ಅತಿ ತಾಪಮಾನದಿಂದ ಸೊರಗಿದ್ದ ಗುಜರಾತ್ ಇದೀಗ ಧಾರಾಕಾರ ಮಳೆಯಿಂದಾಗಿ ನಲುಗುತ್ತಿದೆ. ರಾಜ್ಯದ ಅತೀ ದೊಡ್ಡ ನಗರ ವಡೋದರ ಸಹ ಇತರ ನಗರಗಳಂತೆ ವರುಣನ ಅಬ್ಬರಕ್ಕೆ ತಲ್ಲಣಗೊಂಡಿದೆ. ಮಳೆಯಿಂದ ತೊಯ್ದುಹೊದ ನಗರದ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ ಸಾಕ್ಷಿಯಾಗಿದೆ.
ವಿಪರೀತ ಮಳೆಯಿಂದ ವಡೋದರದ ಅಕೋಟ ರಸ್ತೆ ಜಲಾವೃತವಾಗಿದೆ. ಜನರು ಮನೆಯಿಂದ ಹೊರಬರಲು ಅತಂಕ ಪಡುವಂಥ ಪರಿಸ್ಥಿತಿಯಿದೆ. ಈ ವೇಳೆ ಮೊಸಳೆಯೊಂದು ರಸ್ತೆ ಮೇಲೆ ನಿಂತ ನೀರಿನಲ್ಲಿ ಸಂಚರಿಸುತ್ತಿರುವ ದೃಶ್ಯ ಸೆರೆ ಸಿಕ್ಕಿದೆ.
ಅಕೋಡ ರಸ್ತೆ ಆವರಿಸಿದ ನೀರಿನಲ್ಲಿ ಸಂಚರಿಸುತ್ತಿದ್ದ ನಾಯಿಯೊಂದನ್ನು ಮೊಸಳೆ ಬೇಟೆಯಾಡಲು ಯತ್ನಿಸದೆ. ಇನ್ನೇನು ಮೊಸಳೆಗೆ ಆಹಾರವಾಗಬೇಕಿದ್ದ ನಾಯಿ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಈ ವಿಡಿಯೋ ವಡೋದರದ ಭೀಕರ ಸ್ಥಿತಿಯನ್ನು ಕಣ್ಮುಂದೆ ತರುತ್ತಿದೆ. ನಗರದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರೈಲ್ವೆ ಸಂಚಾರವೂ ಅಸ್ತವ್ಯಸ್ತಗೊಂಡಿದ್ದು, 22 ರೈಲುಗಳು ರದ್ದಾಗಿವೆ. ವಿಮಾನ ನಿಲ್ದಾಣದಲ್ಲೂ ಮಳೆ ನೀರು ನಿಂತ ಕಾರಣ ಎರಡು ವಿಮಾನಗಳನ್ನು ಅಹಮದಾಬಾದ್ನಲ್ಲಿ ಲ್ಯಾಂಡ್ ಮಾಡಲಾಯಿತು.