ತಿರುಚ್ಚಿ (ತಮಿಳುನಾಡು):ತಮಿಳುನಾಡಿನಲ್ಲಿ ಕಂಡು ಬರುವ ಕೆಲವು ವಿಶಿಷ್ಟ ಕೋಟೆಗಳ ಪೈಕಿ ತಿರುಚ್ಚಿಯ ಕೋಟೆ ಕೂಡ ಒಂದು. ಇದು ಸಾಕಷ್ಟು ಪ್ರಾಮುಖ್ಯತೆ ಗಳಿಸಿದ್ದು, ಐತಿಹಾಸಿಕವಾಗಿ ರಚನೆಯಾಗಿದೆ. ವಿಶಾಲವಾದ ಬಂಡೆಯ ಬೆಟ್ಟವೊಂದರ ಮೇಲೆ ನಿರ್ಮಿತವಾದ ಕೋಟೆ ಇದಾಗಿದ್ದು, ಇಲ್ಲಿ ಗಣಪನಿಗೆ ಮುಡಿಪಾಗಿರುವ ಬಲು ಆಕರ್ಷಕವಾದ ದೇವಾಲಯವೊಂದನ್ನು ನಾವು ಕಾಣಬಹುದಾಗಿದೆ. ಅದೇ ರಾಕ್‌ಫೋರ್ಟ್ ಗಣಪತಿ ದೇವಸ್ಥಾನ.
ತಮಿಳುನಾಡಿನಲ್ಲಿ ಇದು ಉಚ್ಚಿ ಪಿಳೈಯಾರ್ ರಾಕ್‌ಫೋರ್ಟ್ ದೇವಸ್ಥಾನ ಎಂದು ಇದು ಪ್ರಸಿದ್ಧಿ ಪಡೆದಿದ್ದು, ವಿಶಿಷ್ಟ ಕಟ್ಟಡ ಶೈಲಿಯಿಂದ ರಚನೆಯಾದ ದೇವಾಲಯವು ಬೃಹತ್ ಬಂಡೆಯನ್ನು ಒಳಗೊಂಡಿದೆ. ಇದು ಹಿಮಾಲಯನ್ ಪರ್ವತಗಳಿಗಿಂತಲೂ ಹಳೆಯದಾದ ವಿಶ್ವದ ಅತ್ಯಂತ ಹಳೆಯ ಬಂಡೆ ಎಂದು ನಂಬಲಾಗಿದೆ. ಈ ದೇವಾಲಯವು 273 ಅಡಿ ಎತ್ತರದಲ್ಲಿದ್ದು, 437 ಮೆಟ್ಟಿಲುಗಳನ್ನು ಹತ್ತಿದ ನಂತರ ಭಕ್ತರು ದೇವಾಲಯದ ಮುಖ್ಯ ಪ್ರದೇಶವನ್ನು ತಲುಪುತ್ತಾರೆ.
ಈ ದೇವಾಲಯವು ಒಂದು ರೀತಿಯಲ್ಲಿ ಭೇಟಿ ನೀಡುಗರಿಗೆ ರಹಸ್ಯಮಯವಾಗಿಯೂ, ವಿಶೇಷವಾಗಿಯೂ ಗೋಚರಿಸುತ್ತದೆ. ಗುಡ್ಡದ ತುದಿಯ ಮೇಲಿರುವ ಗಣೇಶನ ಸನ್ನಿಧಾನವು ಸಾಕಷ್ಟು ಚಿಕ್ಕದಾಗಿದ್ದು ಬಲು ಮೊನಚಾದ, ಕೊರೆದ ಮೆಟ್ಟಿಲುಗಳ ಮೂಲಕ ಏರಿ ತಲುಪಬಹುದಾಗಿದೆ.
ತಿರುಚ್ಚಿಯ ರಾಕ್‌ಫೋರ್ಟ್ ಗಣೇಶ ದೇಗುಲ ಒಂದೊಮ್ಮೆ ಬೆಟ್ಟದ ತುದಿ ತಲುಪಿದರೆ ಸಾಕು, ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ. ಏಕೆಂದರೆ ಇಲ್ಲಿಂದ ಕಂಡುಬರುವ ತಿರುಚ್ಚಿಯ ಅದ್ಭುತ ನೋಟ, ಶ್ರೀರಂಗಂನ ಮೈಮಾಟ ಹಾಗೂ ಕಾವೇರಿ ನದಿಯ ದೃಶ್ಯಗಳು ಮೂಕವಿಸ್ಮಿತರಾಗುವಂತೆ ಮಾಡುತ್ತದೆ.
ಈ ದೇವಾಲಯವು ಸುಮಾರು ಏಳನೆಯ ಶತಮಾನದಲ್ಲಿ ನಿರ್ಮಿತವಾದ ಅತಿ ಪ್ರಾಚೀನ ದೇವಾಲಯವಾಗಿದೆ ಎಂದು ಅಂದಾಜಿಸಲಾಗಿದ್ದು, ಪಲ್ಲವರು ಮೊದಲು ಈ ಬೆಟ್ಟದ ಕಲ್ಲುಗಳನ್ನು ಕೊರೆದು ಹದ ಮಾಡಿದರೆಂದೂ ನಂತರ ಮದುರೈ ನಾಯಕರು ಇಲ್ಲಿನ ದೇವಾಲಯಗಳನ್ನು ನಿರ್ಮಿಸಿದರೆಂದು ಇತಿಹಾಸದಿಂದ ತಿಳಿದುಬರುತ್ತದೆ.
ಈ ಗಣೇಶನ ದೇವಾಲಯದ ಪೌರಾಣಿಕತೆಯೂ ಸಹ ಗೋಕರ್ಣದ ಮಾದರಿಯಲ್ಲೇ ಇದೆ. ರಾವಣನ ಸಹೋದರನಾದ ವಿಭೀಷಣನು ತನ್ನೊಂದಿಗೆ ಧರ್ಮ ಮಾರ್ಗದಲ್ಲಿ ನಿಂತಿದ್ದರ ಗೌರವಾರ್ಥವಾಗಿ, ರಾಮಾಯಣ ಯುದ್ಧದ ನಂತರ ರಾಮನು, ರಂಗನಾಥಸ್ವಾಮಿಯ ವಿಗ್ರಹವೊಂದನ್ನು ಪೂಜಿಸಲು ವಿಭೀಷಣನಿಗೆ ಕಾಣಿಕೆಯಾಗಿ ನೀಡುತ್ತಾನೆ. ಹೀಗೆ ವಿಷ್ಣುವಿನ ವಿಗ್ರಹ ಪಡೆದು ಸಂತಸಗೊಂಡು ವಿಭೀಷಣನು ಇತ್ತ ಲಂಕೆಗೆ ತೆರಳಲು ಹೊರಡುವಾಗ, ದನಗಾಹಿ ಹುಡುಗನಾಗಿ ಗಣೇಶ ಬರುತ್ತಾನೆ. ಅಷ್ಟರಲ್ಲಾಗಲೆ ವಿಭೀಷಣನಿಗೆ ನಿತ್ಯ ಕಾರ್ಯ ಮಾಡುವ ಪ್ರಸಂಗ ತಲೆದೋರಿ, ದನಗಾಹಿ ಹುಡುಗನನ್ನು ಕರೆದು ರಂಗನಾಥಸ್ವಾಮಿಯ ವಿಗ್ರಹ ಕೊಟ್ಟು ಅದನ್ನು ಕೆಳೆಗಿಳಿಸಿದಂತೆ ಹೇಳಿ ಕಾವೇರಿಯಲ್ಲಿ ಮಿಂದಲು ಹೊರಡುತ್ತಾನೆ.
ಆಗ ಗಣೇಶನು ಅಲ್ಲೇ ತೀರದ ಮರಳಿನಲ್ಲಿ ಯೋಗ್ಯವಾದ ಸ್ಥಳವೊಂದನ್ನು ನೋಡಿ ಅಲ್ಲಿ ಪ್ರತಿಮೆಯನ್ನು ಬಿಟ್ಟು ಓಡುತ್ತಾನೆ. ಇದನ್ನು ನೋಡಿದ ವಿಭೀಷಣ ಕೋಪಗೊಂಡು ಗಣೇಶನನ್ನು ಹಿಂಬಾಲಿಸಿ, ಕೊನೆಗೆ ಈ ಬೆಟ್ಟದ ತುದಿಯ ಮೇಲೆ ಆತನನ್ನು ಹಿಡಿದು ಹಣೆಗೆ ಒಂದು ಹೊಡೆತ ನೀಡುತ್ತಾನೆ.
ಬಳಿಕ ಗಣೇಶ ತನ್ನ ನಿಜ ರೂಪ ತಾಳಿ, ರಂಗನಾಥನು ಇಲ್ಲಿಯೆ ಪ್ರತಿಷ್ಠಾಪಿತವಾಗಿರಬೇಕಾಗಿದ್ದುದು ವಿಧಿ ನಿಯಮವೆಂದು ಹೇಳಿ ವಿಭೀಷಣನನ್ನು ಅನುಗ್ರಹಿಸಿ ಕಳುಹಿಸಿಕೊಡುತ್ತಾನೆ. ಇಂದಿಗೂ ಇಲ್ಲಿರುವ ಗಣೇಶನ ದೇವಾಲಯದ ಗಣೇಶನ ವಿಗ್ರಹದ ಹಣೆಯಿರುವ ಸ್ಥಳದಲ್ಲಿ ಚಿಕ್ಕ ತೆಗ್ಗೊಂದು ಬಿದ್ದಿರುವುದನ್ನು ಕಾಣಬಹುದು.