ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ರಾಜ್ಯ ಸರ್ಕಾರ, ಮಾರ್ಚ್ 31 ರವರೆಗೆ ಪುಣೆ, ಪಿಸಿಎಂಸಿ, ಮುಂಬೈ, ನಾಗ್ಪುರದಲ್ಲಿ ಸಂಪೂರ್ಣ ಬಂದ್ ಮಾಡುವಂತೆ ಸೂಚಿಸಿದ ಬೆನ್ನಲ್ಲೆ ಇಂದು ಜನ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಮುಂಬೈನ ಗುರು ತೇಜ್ ಬಹದ್ದೂರ್ನಗರದ ರೈಲು ನಿಲ್ದಾಣದಲ್ಲಿ ಜನಸಂಚಾರ ವಿರಳವಾಗಿತ್ತು. ನಾಗ್ಪುರದ ರಸ್ತೆಗಳು ಕೂಡಾ ವಾಹನ ಸಂಚಾರವಿಲ್ಲದೆ ಖಾಲಿ ಖಾಲಿಯಾಗಿ ಕಾಣುತ್ತಿವೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಂಚರಿಸಬಾರದು ಎಂದು ನಾಗ್ಪುರ ಪೊಲೀಸರು ರಸ್ತೆ ರಸ್ತೆಗಳಲ್ಲಿ ತೆರಳಿ ಘೋಷಣೆ ಮಾಡುತ್ತಿದ್ದಾರೆ.
ಮುಂಬೈ, ಪುಣೆ ಮತ್ತು ನಾಗ್ಪುರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಕಚೇರಿಗಳು ಮತ್ತು ಅಂಗಡಿಗಳನ್ನು ಮಾರ್ಚ್ 31 ರವರೆಗೆ ಮುಚ್ಚಲಾಗುವುದು ಎಂದು ಸಿಎಂ ಉದ್ಧವ್ ಠಾಕ್ರೆ ನಿನ್ನೆ ಘೋಷಣೆ ಮಾಡಿದ್ದರು.
ಅಗತ್ಯ ಅಂಗಡಿಗಳು, ಕಚೇರಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳನ್ನು ಮುಚ್ಚುವಂತೆ ಉದ್ಧವ್ ಠಾಕ್ರೆ ಸೂಚಿಸಿದ್ದಾರೆ. ಮನೆಯಲ್ಲೇ ಕುಳಿತು ಕೆಲಸ ಮಾಡಲು ಸಾಧ್ಯವಾಗದ ಕಚೇರಿಗಳು ಕೂಡಾ ಮಾರ್ಚ್ 31 ರವರೆಗೆ ಬಾಗಿಲು ತೆರೆಯುವಂತಿಲ್ಲ ಎಂದು ಕಡ್ಡಾಯವಾಗಿ ತಿಳಿಸಲಾಗಿದೆ. ಬ್ಯಾಂಕ್ಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.