ನಿರ್ಮಾಣ ಉದ್ಯಮಕ್ಕೆ ಉಕ್ಕು ಮತ್ತು ಸಿಮೆಂಟ್ ಮೂಲ ಕಚ್ಚಾ ವಸ್ತುಗಳು. ಈ ಅವಶ್ಯಕ ನಿರ್ಮಾಣ ಸಾಮಗ್ರಿಗಳ ಬೆಲೆಯಲ್ಲಿ ಉಂಟಾಗಿರುವ ತೀವ್ರ ಏರಿಕೆಗೆ ಇಡೀ ದೇಶ ಸಾಕ್ಷಿಯಾಗಿದೆ. ಸಿಮೆಂಟ್ ಬೆಲೆ ಇದ್ದಕ್ಕಿದ್ದಂತೆ ಏರಿದ್ದಲ್ಲದೇ 50 ಕೆಜಿ ಚೀಲದ ದರ ₹420ರಿಂದ ₹430ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚೀಲ ಸಿಮೆಂಟ್ ದರ ₹349 ಆಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಉಕ್ಕಿನ ಬೆಲೆ ಟನ್‌ಗೆ ₹40,000 ದಿಂದ ₹58,000ಕ್ಕೆ ಏರಿದೆ.
ಕಬ್ಬಿಣದ ಅದಿರನ್ನು ಪಡೆದುಕೊಳ್ಳುವಲ್ಲಿ ಏರಿಕೆಯಾಗಿರುವ ವೆಚ್ಚದಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಉಕ್ಕು ಕಂಪನಿಗಳು ಮಾಡಿದ ಎಲ್ಲಾ ರೀತಿಯ ಪ್ರತಿಪಾದನೆಗಳನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಅಲ್ಲಗಳೆದಿದ್ದಾರೆ. ಬೆಲೆ ಏರಿಕೆ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿರುವ ಅವರು, ಈ ವಾದವನ್ನು ಒಪ್ಪುಲು ಸಾಧ್ಯವಿಲ್ಲ. ಏಕೆಂದರೆ, ದೇಶದ ಬಹುತೇಕ ಪ್ರಮುಖ ಉಕ್ಕು ಕಂಪನಿಗಳು ತಮ್ಮದೇಯಾದ ಕಬ್ಬಿಣದ ಅದಿರು ಗಣಿಗಳನ್ನು ಹೊಂದಿವೆ ಎಂದಿದ್ದಾರೆ. ವಿದ್ಯುತ್ ಮತ್ತು ಕಾರ್ಮಿಕ ವೇತನದ ಬೆಲೆಗಳು ಸ್ಥಿರವಾಗಿದ್ದರೂ ಉಕ್ಕು ತಯಾರಕರು ಬೆಲೆಗಳನ್ನು ಹೆಚ್ಚಿಸಲು ಸಂಚುಕೂಟವನ್ನು ರಚಿಸಿದ್ದಾರೆ ಎಂಬುದು ಅವರ ಆರೋಪ.
ಬೆಲೆ ಏರಿಕೆ ಕುರಿತು ಕ್ರೆಡೈ ಆರೋಪ:
ಸಿಮೆಂಟ್ ಕಂಪನಿಗಳ ವಿಷಯವೂ ಹೀಗೇ ಇದೆ. ಸಿಮೆಂಟ್ ಕಂಪನಿಗಳು ಎಸಗುತ್ತಿರುವ ವಂಚನೆಯನ್ನು ಸಂಸದೀಯ ಸ್ಥಾಯಿ ಸಮಿತಿಯು ಕಂಡು ಹಿಡಿದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಿಮೆಂಟ್ ಬೆಲೆಯನ್ನು ನಿಯಂತ್ರಿಸಲು ಪ್ರತ್ಯೇಕ ವ್ಯವಸ್ಥೆ ಹೊಂದಲು ಸಹ ಸಮಿತಿ ಸಲಹೆ ನೀಡಿತ್ತು. ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಒಕ್ಕೂಟ (ಕ್ರೆಡೈ-ಕಾನ್ಫಿಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ) 2020ರ ಡಿ.18ರಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಿಮೆಂಟ್ ಮತ್ತು ಉಕ್ಕು ತಯಾರಕರು ಬೆಲೆ ಏರಿಕೆಗೆ ಕಾರಣವಾಗುತ್ತಿದ್ದಾರೆ ಎಂದು ಆರೋಪಿಸಿತ್ತು. ಅಷ್ಟೇ ಅಲ್ಲ, ಇಂತಹ ಪ್ರವೃತ್ತಿಯ ದುಷ್ಪರಿಣಾಮಗಳನ್ನೂ ಅದು ವಿವರಿಸಿತ್ತು.
ಇದನ್ನೂ ಓದಿ:ನಿನ್ನೆ ದಾಖಲೆ ಬರೆದ ಬಳಿಕ ಇಂದು 150 ಅಂಕ ಕುಸಿತ ಕಂಡ ಸೆನ್ಸೆಕ್ಸ್
ಏನು ನಡೆಯುತ್ತಿದೆ ಎಂಬ ಮಾಹಿತಿಯು ಪ್ರಧಾನಿ ಗಮನಕ್ಕೆ ಬಂದ ನಂತರವೂ ದರ ಹೆಚ್ಚಿಸುವ ವಿಧಾನ ಖಂಡಿಸುತ್ತಾ, ನಿತಿನ್ ಗಡ್ಕರಿ ಅವರು ಬೆಲೆಗಳನ್ನು ನಿಯಂತ್ರಿಸಲು ನಿಯಂತ್ರಕ ಮಂಡಳಿ ಸ್ಥಾಪಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ತಮ್ಮ ಸರಕುಗಳಿಗೆ ಕೃತಕ ಬೇಡಿಕೆಯನ್ನು ಉಂಟುಮಾಡುವ ಉತ್ಪಾದಕರ ಪ್ರವೃತ್ತಿಯನ್ನು ಗಡ್ಕರಿ ಅವರು ಬಹಿರಂಗವಾಗಿ ಟೀಕಿಸಿದ್ದಾರೆ. ಅಕ್ರಮವನ್ನು ಸಚಿವರು ಸ್ವತಃ ಬಹಿರಂಗಪಡಿಸಿದ್ದರಿಂದ, ಮತ್ತಷ್ಟು ವಿಳಂಬ ಮಾಡದೆ ಪರಿಸ್ಥಿತಿಯನ್ನು ಸರಿಪಡಿಸುವ ಸಮಯ ಈಗ ಬಂದಿದೆ.
ಕೋವಿಡ್-19ರ ಪ್ರಭಾವದಿಂದಾಗಿ ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಈ ಸಮಯದಲ್ಲಿ ಸಿಮೆಂಟ್ ಬೆಲೆಗಳ ಅತಾರ್ಕಿಕ ಏರಿಕೆ ಕುರಿತು ನಿರ್ಮಾಣ ಒಕ್ಕೂಟ ತಮ್ಮೊಳಗೇ ಪರಸ್ಪರ ಟೀಕೆಗಳಲ್ಲಿ ಮುಳುಗಿರುವುದು ಸರಿಯಾಗಿಯೇ ಇದೆ.