ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಾಗೂ ಬಾಲಿವುಡ್ನಲ್ಲಿನ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿ ರಿಯಾ ಚಕ್ರವರ್ತಿ ಹೆಸರು ಕೇಳಿ ಬಂದಿರುವ ಕಾರಣ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್ಸಿಬಿ) ಇಂದು ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಹೀಗಾಗಿ ಸೆಪ್ಟೆಂಬರ್ 22ರವರೆಗೆ ಅವರು ಪೊಲೀಸ್ ವಶದಲ್ಲಿ ಇರಲಿದ್ದಾರೆ. ಇದರ ಮಧ್ಯೆ ಅವರ ಜಾಮೀನು ಅರ್ಜಿ ವಜಾಗೊಂಡಿದೆ.
ಕಳೆದ ಭಾನುವಾರದಿಂದ ಸತತವಾಗಿ ಮೂರು ದಿನಗಳ ಕಾಲ ವಿಚಾರಣೆ ನಡೆಸಿದ್ದ ಎನ್ಸಿಬಿ ಇಂದು ಮತ್ತೆ ವಿಚಾರಣೆ ನಡೆಸಿದ್ದರು. ಇದಾದ ಬಳಿಕ ಅವರನ್ನ ಬಂಧನ ಮಾಡಲಾಗಿದೆ. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕೋರ್ಟ್ಗೆ ಹಾಜರು ಪಡಿಸಲಾಗಿದ್ದು, ಈ ವೇಳೆ ಹೆಚ್ಚಿನ ವಿಚಾರಣೆಗೋಸ್ಕರ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸುಶಾಂತ್ ಸಿಂಗ್ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಅರೆಸ್ಟ್
ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದು, ಇದಾದ ಬಳಿಕ ಜುಲೈ 25ರಂದು ನಟಿ ವಿರುದ್ಧ ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತದನಂತರ ಜುಲೈ 31ರಂದು ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ರಿಯಾ ಅಕೌಂಟ್ಗೆ ಹಣ ವರ್ಗಾವಣೆಗೊಂಡಿದೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಇದಾದ ಬಳಿಕ ಜಾರಿ ನಿರ್ದೇಶನಾಲಯ ಇವರನ್ನ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಸಾವಿನ ತನಿಖೆಯನ್ನ ಸಿಬಿಐ ನಡೆಸುವಂತೆ ಸುಪ್ರೀಂಕೋರ್ಟ್ ಮಹತ್ವದ ವಿಚಾರಣೆ ಹೊರಡಿಸಿತ್ತು.
ವಿಚಾರಣೆ ನಡೆಸುತ್ತಿದ್ದಂತೆ ಇದರಲ್ಲಿ ಡ್ರಗ್ಸ್ ಸಂಬಂಧ ಮಾಹಿತಿ ಹೊರಬರುತ್ತಿದ್ದಂತೆ ಸದ್ಯ ಎನ್ಸಿಬಿ ಇದರ ತನಿಖೆ ನಡೆಸುತ್ತಿದೆ. ಈಗಾಗಲೇ ರಿಯಾ ಸಹೋದರ ಹಾಗೂ ಸುಶಾಂತ್ ಮ್ಯಾನೇಜರ್ ಬಂಧನ ಮಾಡಲಾಗಿದೆ.