ಹೈದರಾಬಾದ್: ಭೀಮಾ ಕೋರೆಗಾಂವ್ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿದ್ದ ತೆಲುಗು ಲೇಖಕ, ಕವಿ, ಹೋರಾಟಗಾರ ವರವರ ರಾವ್ರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ರಾವ್ ಅವರ ಕುಟುಂಬಸ್ಥರಿಗೆ ತಿಳಿಸಿದ್ದು, ಅವರೆಲ್ಲಾ ಮುಂಬೈಗೆ ತೆರಳಲು ಪಾಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆ ರಾವ್ರ ಮೂವರು ಹೆಣ್ಣು ಮಕ್ಕಳು ತಂದೆಯನ್ನು ಜಾಮೀನು ಅಥವಾ ಪರೋಲ್ ಮೇಲೆ ಬಿಡುಗಡೆ ಮಾಡಬೇಕೆಂದು ಮಹಾರಾಷ್ಟ್ರದ ಗವರ್ನರ್, ಮುಖ್ಯಮಂತ್ರಿ ಮತ್ತು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ನಮ್ಮ ತಂದೆಗೆ 80 ವರ್ಷ ವಯಸ್ಸಾಗಿದ್ದು, ನಾನಾ ತರಹದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜೈಲಿನಲ್ಲಿ ಅವರಿಗೆ ಕೊರೊನಾ ಸೋಂಕು ತಗುಲುವ ಭಯ ಕಾಡುತ್ತಿದೆ. ಲಾಕ್ಡೌನ್ನಿಂದಾಗಿ ಕಳೆದ 2 ತಿಂಗಳಿನಿಂದ ಜೈಲಿನಲ್ಲಿ ಅವರನ್ನು ಭೇಟಿಯಾಗಲೂ ಸಹ ಬಿಟ್ಟಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಆರೋಗ್ಯದ ಸ್ಥಿತಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿನ ಕೊರೊನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವರವರ ರಾವ್ ಹಾಗೂ ದಿಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಪ್ರೊ. ಜಿ.ಎಸ್.ಸಾಯಿಬಾಬಾ ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ತೆಲಂಗಾಣದ ನಿರ್ಬಂಧ ವ್ಯತಿರೇಕ ವೇದಿಕೆ ಗುರುವಾರ ಪ್ರತಿಭಟನೆಗೆ ಕರೆಕೊಟ್ಟಿತ್ತು. ಈ ಹಿನ್ನೆಲೆ ಅವರ ಕುಟುಂಬದ ಸದಸ್ಯರು ಹಾಗೂ ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ (IJU) ಮತ್ತು ತೆಲಂಗಾಣ ಸ್ಟೇಟ್ ಆಫ್ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (TSUWJ) ಕಾರ್ಯಕರ್ತರು ಹೈದರಾಬಾದ್ನಲ್ಲಿರುವ ಅವರವರ ನಿವಾಸ ಹಾಗೂ ತೆಲಂಗಾಣದ ಹಲವೆಡೆ ಪ್ರತಿಭಟನೆ ನಡೆಸಿದ್ದರು.
ಕಳೆದ ತಿಂಗಳು ಖ್ಯಾತ ಕವಿ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಸೇರಿ 40 ಕವಿಗಳು, ದೇಶದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಇರುವ ಕಾರಣ ವರವರ ರಾವ್ರನ್ನು ಬಿಡುಗಡೆ ಮಾಡಬೇಕೆಂದು ಪ್ರಧಾನಿ ಮೋದಿಗೆ ಒತ್ತಾಯಿಸಿದ್ದರು.
ಕ್ರಾಂತಿಕಾರಿ ಬರಹಗಾರರ ಸಂಘದ (RWA) ಮುಖಂಡರಾಗಿದ್ದ ವರವರ ರಾವ್ರನ್ನು 2018ರ ನವೆಂಬರ್ನಲ್ಲಿ ಬಂಧಿಸಲಾಗಿತ್ತು. ಪ್ರಸ್ತುತ ಇವರು ನವಿ ಮುಂಬೈನ ತಾಲೋಜ ಜೈಲಿನಲ್ಲಿದ್ದು, ಇಲ್ಲಿ ಕೋವಿಡ್ಗೆ ಕೈದಿಯೊಬ್ಬನ ಸಾವು ಸಂಭವಿಸಿರುವುದು ವರದಿಯಾಗಿದೆ. ಇದೀಗ ಇವರನ್ನು ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.