ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನ ತಂಡಗಳು ಆಗಸ್ಟ್ 20ರ ನಂತರ ಯುನೈಟೆಡ್ ಅರಬ್ ಎಮಿರೈಟ್ಸ್ಗೆ ಪ್ರಯಾಣ ಬೆಳೆಸಲಿವೆ ಎಂದು ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಭಾನುವಾರ ಸ್ಪಷ್ಟನೆ ನೀಡಿದೆ.
ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆಗಸ್ಟ್ 10 ಅಥವಾ ಆಗಸ್ಟ್ 12ರಂದು ಅಬುಧಾಬಿಗೆ ಹೊರಡುತ್ತವೆ ಎಂದು ಹೇಳಲಾಗುತ್ತಿತ್ತು. ಈಗ ಆ ತಂಡಗಳು ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿವೆ.
ಈ ಬಗ್ಗೆ ಫ್ರಾಂಚೈಸಿಯೊಂದರ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ''ಐಪಿಎಲ್ ಆಡಳಿತ ಮಂಡಳಿ ಫ್ರಾಂಚೈಸಿಗಳಿಗೆ ಇ-ಮೇಲ್ ಮಾಡಿದ್ದು, ಯುನೈಟೆಡ್ ಅರಬ್ ಎಮಿರೈಟ್ಸ್ಗೆ ಆಗಸ್ಟ್ 20ರ ನಂತರವಷ್ಟೇ ತೆರಳಬೇಕೆಂದು ಸೂಚಿಸಿದೆ. ಇದಕ್ಕೂ ಮೊದಲು ಹೊರಡುವ ಯಾವುದೇ ಪ್ರಶ್ನೆಯಿಲ್ಲ'' ಎಂದಿದ್ದಾರೆ.
ಇದರ ಜೊತೆಗೆ ಪ್ರಯಾಣದ ನೀಲಿನಕ್ಷೆ ಈಗಾಗಲೇ ತಯಾರಾಗಿದೆ. ನಾಳೆಯಿಂದ ವೀಸಾ ಪ್ರಕ್ರಿಯೆ ಶುರುವಾಗುತ್ತದೆ. ಬಿಸಿಸಿಐನಿಂದ ಇನ್ನೂ ರೂಪುರೇಷೆಗಳನ್ನು ನೀಡಿಲ್ಲ ಎಂದು ಫ್ರಾಂಚೈಸಿಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸೆಪ್ಟೆಂಬರ್ 19ರಿಂದ ಯುಎಇನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ಎಲ್ಲ ತಂಡಗಳು ಸಿದ್ಧತೆಯಲ್ಲಿ ತೊಡಗಿದ್ದು, ಬಿಸಿಸಿಐ ಕೂಡಾ ಐಪಿಎಲ್ ಕ್ರೀಡಾಕೂಟದ ಸಿದ್ಧತೆಯಲ್ಲಿ ತೊಡಗಿದೆ.