ನವದೆಹಲಿ: 'ಭಾರತದಲ್ಲಿನ ಗಾಳಿ ಕಲುಷಿತವಶಗಿದೆ' ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಪ್ರತಿಕ್ರಿಯೆ ನೀಡಿದ್ದಾರೆ.
ಟ್ರಂಪ್ ಇಂದು ಕೋವಿಡ್ ಮೃತರ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲೇಕಿದೆ ಎಂದು ಪ್ರಶ್ನಿಸುತ್ತಾರೆ. ಗಾಳಿಯ ಮೂಲಕ ಭಾರತ ಹೊಲಸನ್ನು ಕಳುಹಿಸುತ್ತದೆ ಎಂದು ಹೇಳುತ್ತಾರೆ. ಭಾರತವನ್ನು 'ಸುಂಕದ ರಾಜ' ಎಂದು ಕರೆಯುತ್ತಾರೆ. ಇವೆಲ್ಲಾ ಡೊನಾಲ್ಡ್ ಟ್ರಂಪ್ ಜೊತೆ ಬೆಳೆಸಿದ ಸ್ನೇಹದ ಪ್ರತಿಫಲ. ಹೌಡಿ - ಮೋದಿ ಕಾರ್ಯಕ್ರಮದ ಫಲಿತಾಂಶ ಎಂದು ಸಿಬಲ್ ಟ್ವೀಟ್ ಮಾಡಿದ್ದಾರೆ.
ನವೆಂಬರ್ 3ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆ ಗುರುವಾರ ನಡೆದ ಅಂತಿಮ ಸುತ್ತಿನ ಚರ್ಚೆಯಲ್ಲಿ ಮಾತನಾಡಿದ್ದ ಟ್ರಂಪ್, ಇಂಗಾಲದ ಹೊರಸೂಸುವಿಕೆ ನಿಯಂತ್ರಣದ ಬಗ್ಗೆ ತಾವು ತೆಗೆದುಕೊಂಡ ಕ್ರಮಗಳನ್ನು ತಾವೇ ಶ್ಲಾಘಿಸಿಕೊಳ್ಳುವ ಭರದಲ್ಲಿ ಚೀನಾ, ರಷ್ಯಾ, ಭಾರತದ ವಾಯು ಮಾಲಿನ್ಯವನ್ನು ದೂಷಿಸಿದ್ದರು. ಜಾಗತಿಕ ಹವಾಮಾನ ಬದಲಾವಣೆಗೆ ಭಾರತವನ್ನು ಹೊಣೆಯಾಗಿಸಿ 'ಭಾರತದಲ್ಲಿನ ಗಾಳಿ ಕಲುಷಿತವಾಗಿದೆ' ಎಂದು ಹೇಳಿಕೆ ನೀಡಿದ್ದರು.
2019ರ ಸೆಪ್ಟೆಂಬರ್ 22ರಂದು ಅಮೆರಿಕದ ಹೋಸ್ಟನ್‌ನ ಕ್ರೀಡಾಂಗಣದಲ್ಲಿ 'ಹೌಡಿ-ಮೋದಿ' ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕಾರ್ಯಕ್ರಮದ ಮೂಲಕ ಮೋದಿಗೆ ಅಮೆರಿಕ ಭವ್ಯ ಸ್ವಾಗತ ನೀಡಿತ್ತು. ಅಷ್ಟೇ ಅಲ್ಲ ಅಮೆರಿಕದಲ್ಲಿರುವ 50,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತನಾಡಿದ್ದರು.