ವಿಶಾಖಪಟ್ಟಣಂ (ಆಂಧ್ರಪ್ರದೇಶ): ತಿರುಮಲ ತಿರುಪತಿ ದೇವಸ್ಥಾನದ ಸ್ಥಿರಾಸ್ತಿ ಮಾರಾಟದ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಆಂಧ್ರಪ್ರದೇಶ ಸರ್ಕಾರ ಟಿಟಿಡಿಗೆ ಸೂಚಿಸಿದೆ. ಜನವರಿ 30, 2016 ರಂದು, ಟಿಟಿಡಿ ಮಂಡಳಿ 50 ಆಸ್ತಿಗಳ ಮಾರಾಟ ಮಾಡಲು ನಿರ್ಧರಿಸಿತ್ತು. ಆದರಂತೆ ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ದೇವಸ್ಥಾನಕ್ಕೆ ಸೇರಿದ ಆಸ್ತಿಗಳ ಹಾರಾಜಿಗೆ ಮುಂದಾಗಿತ್ತು.
ಭಕ್ತರ, ರಾಜಕಾರಣಿಗಳ ವಿರೋಧಕ್ಕೆ ಮಣಿದ ಆಂಧ್ರಸರ್ಕಾರ: ಟಿಟಿಡಿ ನಿರ್ಧಾರಕ್ಕೆ ಬ್ರೇಕ್
ತಿರುಪತಿ ತಿಮ್ಮಪ್ಪನ ಸ್ಥಿರಾಸ್ತಿ ಮಾರಾಟಕ್ಕೆ ಮುಂದಾಗಿದ್ದ ಟಿಟಿಡಿ ನಿರ್ಧಾರಕ್ಕೆ ಆಂಧ್ರ ಸರ್ಕಾರ ತಡೆ ನೀಡಿ ಆದೇಶ ಹೊರಡಿಸಿದೆ. ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ದೇವಸ್ಥಾನಕ್ಕೆ ಸೇರಿದ 50 ಆಸ್ತಿಗಳ ಮಾರಾಟಕ್ಕೆ ಟಿಟಿಡಿ ಆಡಳಿತ ಮಂಡಳಿ ಮುಂದಾಗಿತ್ತು.
ಇದಕ್ಕೆ ತಿಮ್ಮಪ್ಪನ ಭಕ್ತರು ಮತ್ತು ಪ್ರತಿಪಕ್ಷಗಳು, ರಾಜಕಾರಿಣಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಟಿಟಿಡಿ ನಡೆಗೆ ದೇಶಾದ್ಯಂತ ಆಕ್ರೋಶ ಹೆಚ್ಚುತ್ತಿರುವುದನ್ನ ಮನಗಂಡ ಆಂಧ್ರಪ್ರದೇಶ ಸರ್ಕಾರ ಈಗ ಮಧ್ಯ ಪ್ರವೇಶ ಮಾಡಿದೆ. ಧಾರ್ಮಿಕ ಹಿರಿಯರು, ಭಕ್ತರು ಹಾಗೂ ಇತರರ ಅಭಿಪ್ರಾಯಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಸರ್ಕಾರ ನಿರ್ದೇಶಿಸಿದೆ. ಅನೂರ್ಜಿತ ಆಸ್ತಿ ಎಂದು ಹೇಳಲಾಗುತ್ತಿದ್ದ ಈ ಸ್ಥಳಗಳಲ್ಲಿ ದೇವಾಲಯಗಳು ಮತ್ತು ದತ್ತಿ ಅಭಿಯಾನಗಳನ್ನು ನಿರ್ಮಿಸುವ ಸಾಧ್ಯತೆಯನ್ನು ಪರಿಗಣಿಸುವ ಅವಶ್ಯಕತೆಯಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮುಂದಿನ ಆದೇಶ ಹೊರಡಿಸುವವರೆಗೆ 50 ಸ್ಥಳಗಳ ಮಾರಾಟದ ಪ್ರಸ್ತಾವನೆಯನ್ನು ತಡೆಹಿಡಿಯಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಸಂಬಧ ಸಂಪೂರ್ಣ ವರದಿ ಸಲ್ಲಿಸುವಂತೆ ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರ್ಕಾರ ಸೂಚನೆಯನ್ನೂ ನೀಡಿದೆ.