ಕರ್ನಾಟಕ

karnataka

By

Published : Dec 30, 2019, 5:35 PM IST

ETV Bharat / bharat

EDITORIAL: 2019: ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿ ಮೇಲೆದ್ದು ಬರುವ ತುರ್ತು ಅಗತ್ಯವಿದೆ!!

ಬ್ಯಾಂಕಿಂಗ್‌ ವಲಯದಲ್ಲಿನ ಈಗಿನ ಪರಿಸ್ಥಿತಿಯ ಬಗ್ಗೆ ಸರ್ಕಾರ ಅತ್ಯಂತ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಬ್ಯಾಂಕಿಂಗ್‌ ವಲಯದಲ್ಲಿ ದಿವಾಳಿತನ ವಿಚಾರದಲ್ಲಿ ಯಾವುದೇ ಸಮಸ್ಯೆಯೂ ಈಗ ಎದುರಾಗುತ್ತಿಲ್ಲ. ಸದ್ಯದ ಮಟ್ಟಿಗೆ ಬ್ಯಾಂಕ್‌ಗಳು ಅತ್ಯಂತ ಸುರಕ್ಷಿತ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಯಾಕೆಂದರೆ ಆರ್ಥಿಕತೆ ಕುಸಿತದ ಈ ಗಂಭೀರ ಸಮಯದಲ್ಲಿ ಎದುರಾಗುವ ಯಾವುದೇ ಸ್ವತ್ತು ಮತ್ತು ಬಾಧ್ಯತೆಯಲ್ಲಿನ ಹೊಂದಾಣಿಕೆ ಕೊರತೆಯನ್ನು ಸರಿಪಡಿಸಲು ಯಾವುದೇ ಕ್ರಮವನ್ನೂ ಬ್ಯಾಂಕ್‌ಗಳು ಕೈಗೊಳ್ಳಬಹುದಾದ ಸಾಧ್ಯತೆ ಇರುತ್ತದೆ.

economic downturn
ಆರ್ಥಿಕ ಹಿಂಜರಿತ

2019ನೇ ಇಸ್ವಿಯನ್ನು ಆರ್ಥಿಕ ಪರಿಸ್ಥಿತಿಯ ಮುನ್ನೆಚ್ಚರಿಕೆ ಆರಂಭವಾದ ವರ್ಷ ಅಥವಾ ಆರ್ಥಿಕ ಸ್ಥಿತಿ ಮಹತ್ವದ ಸ್ಥಿತ್ಯಂತರಕ್ಕೆ ಕಾರಣವಾದ ವರ್ಷ ಎಂದು ನಾವು ಪರಿಗಣಿಸಬಹುದು. ಇದನ್ನು ರಾಜಕೀಯ ವಲಯ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಆಧರಿಸಿ ಯಾವ ರೀತಿ ಇದನ್ನು ಪರಿಗಣಿಸಲಾಗುತ್ತದೆ ಎಂಬುದೂ ಅವಲಂಬಿಸಿರುತ್ತದೆ. ಚೀನಾ ಹಾಗೂ ಅಮೆರಿಕದ ಮಧ್ಯೆ ನಡೆದ ವ್ಯಾಪಾರ ಸಮರ ಹಾಗೂ 2019ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶದ ನಂತರದಲ್ಲಿ ಜಾಗತಿಕ ಆರ್ಥಿಕತೆ ಒಂದು ಪ್ರಕ್ಷುಬ್ಧ ಸ್ಥಿತಿಗೆ ಬದಲಾಗುತ್ತಿದ್ದಂತೆಯೇ ವರ್ಷ ಆರಂಭವಾಯಿತು ಹಾಗೂ ಆರ್ಥಿಕತೆ ಕುಸಿತ ಆರಂಭವೂ ಆಯಿತು. ಬಹುತೇಕ ಇಡೀ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಕುಸಿತ ಉಂಟಾಗುತ್ತಿದೆಯೇ ಅಥವಾ ಇಲ್ಲವೇ ಎಂಬ ಚರ್ಚೆಗೆ ಹೆಚ್ಚು ಮಹತ್ವ ಸಿಗಲಿಲ್ಲ. ಬದಲಿಗೆ ದೇಶದ ಆರ್ಥಿಕತೆ ಯಾವ ರೀತಿಯ ಕುಸಿತಕ್ಕೆ ಕಾರಣವಾಗುತ್ತಿದೆ ಎಂಬ ಬಗ್ಗೆ ವಾದ - ಪ್ರತಿವಾದ ನಡೆಯಿತು.

ಆರ್ಥಿಕತೆ ರಚನಾತ್ಮಕ ಕುಸಿತ ಕಾಣುತ್ತಿದೆಯೇ ಅಥವಾ ಆವರ್ತನ ಕುಸಿತ ಕಾಣುತ್ತಿದೆಯೇ ಎಂಬ ಕುರಿತು ಚರ್ಚೆಯೇ ಹೆಚ್ಚು ನಡೆಯಿತು. ಪ್ರತಿ ತಿಂಗಳೂ ಬಿಡುಗಡೆಯಾಗುವ ಪ್ರಮುಖ ಸೂಚಕಗಳಾದ ವಿದ್ಯುತ್‌ ಉತ್ಪಾದನೆ, ಪೆಟ್ರೋಲಿಯಂ ಬಳಕೆ ಅಂಕಿ ಅಂಶಗಳು, ಔದ್ಯಮಿಕ ಉತ್ಪನ್ನ, ಎಲೆಕ್ಟ್ರಾನಿಕ್ ಪಾವತಿಗಳು ಇತ್ಯಾದಿ ಪ್ರತಿ ದಿನದಿಂದ ದಿನಕ್ಕೆ ಇಳಿಕೆ ಆಗುತ್ತಲೇ ಇರುವುದನ್ನು ಸೂಚಿಸಿ ಆರ್ಥಿಕ ಕುಸಿತಕ್ಕೆ ಸಾಕ್ಷ್ಯ ಹೇಳಿದವು. ಆದರೆ, ಆರ್ಥಿಕ ಕುಸಿತಕ್ಕೆ ಮೂಲ ಕಾರಣ ಏನು ಎಂಬುದನ್ನು ಕಂಡುಕೊಳ್ಳುವಲ್ಲಿ ಮತ್ತು ಅದರ ಕುರಿತು ಚರ್ಚೆ ನಡೆಸುವಲ್ಲಿ ಬಹುತೇಕ ಎಲ್ಲರೂ ವಿಫಲರಾದರು. ದೇಶದ ಪ್ರತಿಯೊಂದು ವಿಭಾಗದಲ್ಲಿ ಸಾಲದ ಹೊರೆ ಹೆಚ್ಚಳ ಆಗಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಯಾರೂ ಗಮನಿಸಲೇ ಇಲ್ಲ.

ಕೇಂದ್ರ ಸರ್ಕಾರಕ್ಕೆ ಸ್ವಲ್ಪ ಮಟ್ಟಿಗೆ ಉಸಿರಾಟಕ್ಕೆ ಅನುವು ಮಾಡಿದ ಸಂಗತಿಯೆಂದರೆ ಈ ಅವಧಿಯಲ್ಲಿ ತೈಲ ಬೆಲೆ ಸ್ಥಿರವಾಗಿತ್ತು. ಹೀಗಾಗಿ ಈ ಆರ್ಥಿಕ ಕುಸಿತದ ಸಮಯದಲ್ಲೇ ವ್ಯಾಪಾರ ಅಸಮತೋಲನ ಮತ್ತು ಕರೆನ್ಸಿ ವಿನಿಮಯ ವ್ಯತ್ಯಯವನ್ನು ಕಡಿಮೆ ಮಾಡುವ ಮೂಲಕ ಸರ್ಕಾರಕ್ಕೆ ಹೊರೆ ಕಡಿಮೆ ಮಾಡಿತು. ಇದೇ ವರ್ಷದಲ್ಲಿ ಸರ್ಕಾರವು ಆರ್ಥಿಕ ಉತ್ತೇಜನಕ್ಕೆ ಹಲವು ಕ್ರಮಗಳನ್ನೂ ಕೈಗೊಂಡಿತು. ಹೊಸ ಕಂಪನಿಗಳಿಗೆ ತೆರಿಗೆ ಇಳಿಕೆ ಮಾಡಿ ಶೇ. 15 ಕ್ಕೆ ನಿಗದಿಸಿತು. ಇನ್ನೊಂದೆಡೆ ಎಲೆಕ್ಟ್ರಿಕ್‌ ವಾಹನಗಳ ಖರೀದಿಯ ಮೇಲೆ ಹೆಚ್ಚುವರಿಯಾಗಿ ರೂ. 1.5 ಲಕ್ಷ ತೆರಿಗೆ ಇಳಿಕೆಯನ್ನೂ ಘೋಷಿಸಿತು. ಇದರ ಜೊತೆಗೆ ಇನ್ನೂ ಹಲವು ಕ್ರಮಗಳನ್ನು ಸರ್ಕಾರ ಘೋಷಿಸಿ ಆರ್ಥಿಕತೆ ಉತ್ತೇಜನಕ್ಕೆ ಪ್ರೋತ್ಸಾಹ ನೀಡಿತು.

ಬ್ಯಾಂಕಿಂಗ್‌ ಸಮಸ್ಯೆಗೆ ಮುಕ್ತಿಯಿಲ್ಲ

ಈ ವರ್ಷ ಬ್ಯಾಂಕಿಂಗ್‌ ಸಮಸ್ಯೆಗಳನ್ನು ಮುಂದುವರಿಯುತ್ತಲೇ ಹೋದುದನ್ನು ನಾವು ಗಮನಿಸಿದ್ದೇವೆ. ಸರ್ಕಾರ ಈ ವರ್ಷ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅಂದರೆ ಪಿಎಸ್‌ಬಿಗಳಿಗೆ ಯಶಸ್ವಿಗಾಗಿ ಅಪಾರ ಪ್ರಮಾಣದಲ್ಲಿ ಮರುಬಂಡವಾಳವನ್ನು ಒದಗಿಸಿತು. ತೀರಾ ಇತ್ತೀಚೆಗಂತೂ 70 ಸಾವಿರ ಕೋಟಿ ರೂ. ಮರುಬಂಡವಾಳವನ್ನು ಸರ್ಕಾರ ಘೋಷಿಸಿತ್ತು. 2019 ಮೇಯಲ್ಲಿ ಸಾರ್ವತ್ರಿಕ ಚುನಾವಣೆ ಮುಗಿಯುತ್ತಿದ್ದಂತೆಯೇ ಸರ್ಕಾರ ಈ ಘೋಷಣೆ ಮಾಡಿತ್ತು. ಅಷ್ಟಾದರೂ, ವರ್ಷದ ಕೊನೆಯಲ್ಲಿ ಪಿಎಸ್‌ಬಿಗಳ ಎನ್‌ಪಿಎಗಳಲ್ಲಿ ಅಂದರೆ ಮರುಪಾವತಿಯಾಗಿಲ್ಲದ ಸಾಲದಲ್ಲಿ ಗಂಭೀರ ಪ್ರಮಾಣದಲ್ಲಿ ಇಳಿಕೆಯೇನೂ ಆಗಲಿಲ್ಲ. ಸ್ವಲ್ಪ ಪ್ರಮಾಣದಲ್ಲಷ್ಟೇ ಇಳಿಕೆಯಾಗಿದೆ. ಇದು ಕೂಡ ತಾತ್ಕಾಲಿಕ ಪ್ರಕ್ರಿಯೆ ಎಂದು ಕರೆಯಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಅತ್ಯಂತ ಎಚ್ಚರಿಕೆಯಿಂದ ಸಾಲ ನೀಡುತ್ತಿವೆ ಅಥವಾ ಸಾಲ ನೀಡಲು ಹಿಂಜರಿಯುತ್ತಿವೆ ಎಂಬ ಕಾರಣಕ್ಕೆ ಈ ಎನ್‌ಪಿಎ ಇಳಿಕೆಯಾಗಿದೆ ಎನ್ನಬಹುದು.

ಇನ್ನೊಂದೆಡೆ ಮುದ್ರಾ ಸಾಲಗಳಲ್ಲಿ ಎನ್‌ಪಿಎ ಹೆಚ್ಚಳ ಕೂಡ ಮುಂದಿನ ದಿನಗಳಲ್ಲಿ ಪಿ ಎಸ್‌ ಬಿ ಗಳ ಎನ್‌ ಪಿ ಎಗಳ ಹೆಚ್ಚಳವಾಗುವ ಸಾಧ್ಯತೆಯನ್ನು ಮೂಡಿಸಿವೆ. ಒಂದೆಡೆ ಪಿ ಎಸ್ ಬಿ ಗಳಲ್ಲಿ ಶೇ. 11.2 ರಿಂದ ಶೇ. 9.1 ಕ್ಕೆ ಎನ್‌ ಪಿ ಎ ಇಳಿಕೆ ಆಗಿದ್ದರೆ, ಇದೇ ಅವಧಿಯಲ್ಲಿ ಖಾಸಗಿ ಬ್ಯಾಂಕ್‌ಗಳ ಎನ್‌ ಪಿ ಎ ಹೆಚ್ಚಳ ಕಂಡಿದೆ. ಬ್ಯಾಂಕಿಂಗ್‌ ವಲಯದಲ್ಲಿ ಕಂಡುಬರುತ್ತಿರುವ ಕುಸಿತಕ್ಕೆ ಮದ್ದು ನೀಡಲು ಎಲ್ಲ ವಿಧಾನಗಳನ್ನೂ ಸರ್ಕಾರ ಪ್ರಯತ್ನಿಸಿ ಸೋತಿದೆ. 10 ಪಿ ಎಸ್ ಬಿ ಗಳಲ್ಲಿ ನಾಲ್ಕು ಸಂಸ್ಥೆಗಳನ್ನಾಗಿ ವಿಲೀನ ಮಾಡಿತು. ಇದರಿಂದ ಬ್ಯಾಂಕ್‌ಗಳ ಸಂಖ್ಯೆ ಕಡಿಮೆ ಆಯಿತು. ಶೇ. 15 ರಷ್ಟು ಎನ್‌ ಪಿ ಎ ಹೊಂದಿದ್ದ ಐ ಡಿ ಬಿ ಐ ಬ್ಯಾಂಕ್‌ ಅನ್ನು ಎಲ್‌ ಐ ಸಿ ಖರೀದಿಸಿತು. ಎಲ್‌ ಐ ಸಿ ದೊಡ್ಡ ಸಂಸ್ಥೆಯಾಗಿರುವುದರಿಂದ ಐ ಡಿ ಬಿ ಐ ಬ್ಯಾಂಕ್‌ ಚೇತರಿಸಿಕೊಳ್ಳಲು ಇದು ಅನುವು ಮಾಡಿಕೊಟ್ಟಿತು. ಆದರೆ ಈ ಯಾವ ಅಲ್ಪ ಅವಧಿ ಪರಿಹಾರಗಳೂ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲಿಲ್ಲ.

ಬ್ಯಾಂಕಿಂಗ್‌ ವಲಯದಲ್ಲಿನ ಈಗಿನ ಪರಿಸ್ಥಿತಿಯ ಬಗ್ಗೆ ಸರ್ಕಾರ ಅತ್ಯಂತ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಬ್ಯಾಂಕಿಂಗ್‌ ವಲಯದಲ್ಲಿ ದಿವಾಳಿತನ ವಿಚಾರದಲ್ಲಿ ಯಾವುದೇ ಸಮಸ್ಯೆಯೂ ಈಗ ಎದುರಾಗುತ್ತಿಲ್ಲ. ಸದ್ಯದ ಮಟ್ಟಿಗೆ ಬ್ಯಾಂಕ್‌ಗಳು ಅತ್ಯಂತ ಸುರಕ್ಷಿತ ವಿಧಾನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿವೆ. ಆದರೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಯಾಕೆಂದರೆ ಆರ್ಥಿಕತೆ ಕುಸಿತದ ಈ ಗಂಭೀರ ಸಮಯದಲ್ಲಿ ಎದುರಾಗುವ ಯಾವುದೇ ಸ್ವತ್ತು ಮತ್ತು ಬಾಧ್ಯತೆಯಲ್ಲಿನ ಹೊಂದಾಣಿಕೆ ಕೊರತೆಯನ್ನು ಸರಿಪಡಿಸಲು ಯಾವುದೇ ಕ್ರಮವನ್ನೂ ಬ್ಯಾಂಕ್‌ಗಳು ಕೈಗೊಳ್ಳಬಹುದಾದ ಸಾಧ್ಯತೆ ಇರುತ್ತದೆ.

ಈ ಬ್ಯಾಂಕಿಂಗ್‌ ವಲಯದ ಸಮಸ್ಯೆಯಿಂದಾಗಿ ಹಲವು ಪರಿಣಾಮಗಳು ಕಂಡುಬರುತ್ತಿವೆ. ವಿಶ್ವದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಆರ್ಥಿಕ ವಲಯದ ಪೈಕಿ ಭಾರತದ ಮಾರುಕಟ್ಟೆ ಅತ್ಯಂತ ಕ್ಷೀಣವಾಗಿದೆ. ರಿಸ್ಕ್ ಹೊಂದಿದೆ ಸ್ವತ್ತು ಅನುಪಾತಕ್ಕೆ ಹೋಲಿಸಿದರೆ ಜಿ20 ರಾಷ್ಟ್ರಗಳ ಪೈಕಿಯೂ ಭಾರತದ ಆರ್ಥಿಕ ಮಾರುಕಟ್ಟೆ ಅತ್ಯಂತ ಕ್ಷೀಣವಾಗಿದೆ. ಕಳೆದ ವರ್ಷದ ವಿಶ್ವದ ದತ್ತಾಂಶವನ್ನು ಹೋಲಿಸಿದರೆ ಕೇವಲ ಎರಡು ದೇಶಗಳು ಭಾರತಕ್ಕಿಂತ ಕೆಳಗಿನ ಸ್ಥಿತಿಯಲ್ಲಿದ್ದವು. ಗ್ರೀಸ್ ಹಾಗೂ ರಷ್ಯನ್‌ ಫೆಡರೇಶನ್‌ನ ಮರುಪಾವತಿಯಾಗದ ಸಾಲ ಅಂದರೆ ಎನ್‌ ಪಿ ಎ ತಲಾ ಶೇ. 42 ಮತ್ತು ಶೇ. 10.1 ಆಗಿತ್ತು. ಇಡೀ ಬ್ಯಾಂಕಿಂಗ್‌ ವಲಯವೇ ಕುಸಿಯುತ್ತಿದೆ ಎಂಬುದನ್ನು ಹೇಳುವುದು ಈ ಮಾತಿನ ಉದ್ದೇಶವೇನೂ ಅಲ್ಲ. ಬದಲಿಗೆ ಬೆಳೆಯುತ್ತಿರುವ ಮಾರುಕಟ್ಟೆಗಿಂತ ಭಾರತದ ಬ್ಯಾಂಕ್‌ ವಲಯ ಹೆಚ್ಚು ಆರೋಗ್ಯಕರವಾಗಿವೆ. ಯಾಕೆಂದರೆ ಇವುಗಳ ಸಾಲ ನೀಡಿಕೆ ಪ್ರಮಾಣವು ಇತರ ಬೆಳೆಯುತ್ತಿರುವ ಮಾರುಕಟ್ಟೆಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಇವೆ. ಇವುಗಳ ಬಳಿ ಸಾಕಷ್ಟು ಹಣ ಈಗ ಇವೆ. ಸರ್ಕಾರ ಅಥವಾ ಆರ್‌ಬಿಐ ಬಳಿ ಈಗ ನಿರ್ಧರಿತ ದ್ರವ್ಯತೆ ಅನುಪಾತ (ಎಸ್‌ ಎಲ್‌ ಆರ್) ನಗದು ಮೀಸಲು ಅನುಪಾತ (ಸಿ ಆರ್‌ ಆರ್‌) ವಿಚಾರದಲ್ಲಿ ಹೆಚ್ಚಿನ ಹಣ ಇದೆ. ಇವೆರಡನ್ನೂ ಒಟ್ಟಾಗಿ ಸೇರಿಸಿದರೆ ಬ್ಯಾಂಕ್‌ಗಳ ಸಂಪನ್ಮೂಲಗಳ ಶೇ. 25 ಆಗುತ್ತದೆ. ಆದರೆ, ಬ್ಯಾಂಕ್‌ಗಳ ಆರ್ಥಿಕತೆ ಕುಸಿತವು ದೇಶದ ಆರ್ಥಿಕತೆ ವಿಸ್ತರಿಸುವಿಕೆಯ ಮೇಲೆ ಪರಿಣಾಮ ಉಂಟು ಮಾಡುತ್ತಿವೆ. ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿಗಳು ದೇಶದ ಒಳಗಿನ ಜನರಿಗೆ ಹಾಗೂ ಉದ್ಯಮಗಳಿಗೆ ಸಾಲ ನೀಡುವುದನ್ನು ಕಡಿಮೆ ಮಾಡುತ್ತಿವೆ ಎಂದಾದರೆ, ಹಣಕಾಸು ಹರಿವು ಎಲ್ಲಿಂದ ಬರಲು ಸಾಧ್ಯ? ಇದಕ್ಕೆ ಕಾರಣ ಹುಡುಕತ್ತ ಹೊರಟರೆ ಕಂಡುಬರುವುದು ಏನೆಂದರೆ, ಬಾಹ್ಯ ವಾಣಿಜ್ಯಿಕ ಸಾಲದ ರೂಪದಲ್ಲಿ ವಿದೇಶಗಳಿಂದ ಸಾಲ ಹೆಚ್ಚಳವಾಗುತ್ತಿದೆ. ಪ್ರಸ್ತುತ ಹಣಕಾಸು ವರ್ಷದಲ್ಲೇ ಇದು ಸುಮಾರು 70 ಸಾವಿರ ಕೋಟಿ ರೂ.ಗೆ ತಲುಪಿದೆ.

ಎನ್‌ಬಿಎಫ್‌ಸಿ ಕುಸಿತ

ಈ ವರ್ಷ ಆರ್ಥಿಕ ಕುಸಿತಕ್ಕೆ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ ಬಿ ಎಫ್‌ಸಿ) ಗಳ ಕೊಡುಗೆ ಅತ್ಯಂತ ಮಹತ್ವದ್ದು. ಇವು ಇಡೀ ದೇಶದ ಆರ್ಥಿಕತೆಯ ಮೇಲೆ ಆರ್ಥಿಕ ಕುಸಿತದ ತೀವ್ರತೆಯನ್ನು ಹೆಚ್ಚಿಸಿದವು. ಶೇ. 40 ರಷ್ಟು ಎನ್‌ ಬಿ ಎಫ್‌ ಸಿ ಸಾಲಗಳು ವಾಹನ ಉದ್ಯಮ ಮತ್ತು ಸಂಬಂಧಿತ ಖರೀದಿಗಳನ್ನು ಆವರಿಸಿವೆ. ವಾಹನೋದ್ಯಮದ ವಿವಿಧ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎನ್‌ ಬಿ ಎಫ್‌ ಸಿ ಸಾಲ ನೀಡಿವೆ. ಕಳೆದ 3 ವರ್ಷಗಳಲ್ಲಿ ಆರ್ಥಿಕತೆ ದೊಡ್ಡ ಪ್ರಮಾಣದಲ್ಲಿ ಕುಸಿತ ಕಾಣದೇ ಇರಲು ಮುಖ್ಯ ಕಾರಣವೂ ಇದೇ ಆಗಿತ್ತು. ಯಾಕೆಂದರೆ ಈ 3 ವರ್ಷಗಳಲ್ಲಿ ಎನ್‌ ಬಿ ಎಫ್‌ ಸಿಗಳು ಈ ವಲಯಕ್ಕೆ ಭಾರಿ ಸಂಖ್ಯೆಯಲ್ಲಿ ಸಾಲ ನೀಡಿದ್ದವು. 2018 ಮಾರ್ಚ್‌ ಕೊನೆಯ ಹೊತ್ತಿಗೆ ಲೆಕ್ಕ ಹಾಕಿದರೆ, ಎನ್‌ ಬಿ ಎಫ್‌ ಸಿ ಗಳ ಸಾಲ ಅಥವಾ ಸ್ವತ್ತುಗಳ ಮೌಲ್ಯ 30.85 ಲಕ್ಷ ಕೋಟಿ ರೂ. ಗೆ ತಲುಪಿದ್ದವು. 2019 ಮಾರ್ಚ್‌ ಹೊತ್ತಿಗೆ ಇದು 32.57 ಲಕ್ಷ ಕೋಟಿ ರೂ. ಅನ್ನು ತಲುಪಿದ್ದವು. ಆದರೆ ಎಷ್ಟು ಬೇಗ ಏರಿಕೆ ಕಂಡಿದ್ದವೋ ಅಷ್ಟೇ ವೇಗದಲ್ಲಿ ಇವು ಇಳಿಕೆಯನ್ನೂ ಕಂಡವು. ಯಾಕೆಂದರೆ, ಅಲ್ಲಿಯವರೆಗೂ ತುರೀಯಾವಸ್ಥೆ ತಲುಪಿದ್ದ ಎನ್‌ ಬಿ ಎಫ್‌ ಸಿಗಳ ಸಾಲ ಪ್ರಮಾಣ 2019 ಸೆಪ್ಟೆಂಬರ್‌ ವೇಳೆಗೆ ಶೇ. 26.8 ಹಾಗೂ ಮಾರ್ಚ್‌ 2018ರ ವೇಳೆಗೆ ಶೇ. 13.2 ಕ್ಕೆ ಕುಸಿದು ಬಿಟ್ಟಿದ್ದವು. ಇದಕ್ಕೆ ಮುಖ್ಯ ಕಾರಣವೇ ಐ ಎಲ್ ಆಂಡ್ ಎಫ್‌ ಎಸ್‌ನಲ್ಲಿ ಉಂಟಾದ ಕುಸಿತವೇ ಕಾರಣವಾಯಿತು. ಇದರಿಂದಾಗಿ ಬೇಡಿಕೆಯಲ್ಲಿ ಇಳಿಕೆಯಾಗಿ ಸಾಲ ನೀಡಿಕೆಯಲ್ಲೂ ಕುಸಿತ ಕಂಡುಬಂತು.

ಈ ವರ್ಷ ಹಲವು ಕಾನೂನುಗಳೂ ಕೂಡ ಜಾರಿಗೆ ಬಂದಿದ್ದನ್ನು ನಾವು ಗಮನಿಸಬಹುದು. ದಿವಾಳಿತನ ನೀತಿ, ರಾಜಿ ಸಂಧಾನ ಕಾನೂನುಗಳು ಜಾರಿಗೆ ಬಂದವು. ಇವನ್ನು ಉದ್ಯಮ ಉತ್ತಮ ರೀತಿಯಲ್ಲೇ ಸ್ವಾಗತಿಸಿತು. ಇದರ ಜೊತೆಗೆ ಔದ್ಯಮಿಕ ಸಂಬಂಧಗಳ ನೀತಿ ರೂಪದಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಇತರ ಹಲವು ಕಾನೂನುಗಳು ಕೂಡ ಬದಲಾವಣೆಗೆ ಒಳಪಟ್ಟವು. ಈ ವರ್ಷದಲ್ಲಿ ಹಲವು ಪ್ರಮುಖ ಆರ್ಥಿಕ ಚಟುವಟಿಕೆಗಳು ನಡೆದವು. ಈ ಪೈಕಿ ಅತ್ಯಂತ ಮಹತ್ವದ್ದೆಂದರೆ, ಟೆಲಿಕಾಂ ವಲಯವು ಮಹತ್ವದ ಬದಲಾವಣೆಗೆ ತೆರೆದುಕೊಂಡಿದೆ ಎಂಬುದನ್ನು ಈ ವರ್ಷವು ಅನಾವರಣಗೊಳಿಸಿತು. ಈ ವಲಯದಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಯಿತು ಮತ್ತು ಸರ್ಕಾರದ ಬೇಡಿಕೆ ಕೂಡ ಈ ವಲಯವನ್ನು ಭಾರಿ ಪ್ರಮಾಣದಲ್ಲಿ ಶಕ್ತಿಹೀನವನ್ನಾಗಿಸಿತ್ತು. ದೇಶದಲ್ಲಿ ನಡೆದ ಟೆಲಿಕಾಂ ಕ್ರಾಂತಿಯಿಂದ ಇಡೀ ದೇಶದ ಜನರು ಭಾರಿ ಲಾಭ ಪಡೆದುಕೊಂಡರು ಎಂಬುದರಲ್ಲಿ ಯಾವುದೇ ಎರಡು ಮಾತಿಲ್ಲ. ಆದರೆ ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಹೊರಡಿಸಿದ ಆದೇಶವೊಂದು ಇಡೀ ಟೆಲಿಕಾಂ ವಲಯವನ್ನು ದಿವಾಳಿತನಕ್ಕೆ ದೂಡುವ ಆತಂಕಕ್ಕೆ ಕಾರಣವಾಗಿದೆ. ಹೊಂದಿಸಿದ ಒಟ್ಟು ಆದಾಯದ ರೂಪದಲ್ಲಿ 92 ಸಾವಿರ ಕೋಟಿ ರೂ. ಅನ್ನು ಟೆಲಿಕಾಂ ವಲಯ ಪಾವತಿ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ಆದೇಶ ಹೊರಡಿಸಿದೆ.

ಮುಂದಿನ ದಾರಿ

ಆರ್ಥಿಕ ಹಿಂಜರಿಕೆ ಹೀಗೆಯೇ ಮುಂದುವರಿಯಲು ಬಿಟ್ಟರೆ ಮತ್ತು ಅದು ಅದೇ ರೀತಿ ಮುಂದುವರಿಯುತ್ತಲೇ ಇದ್ದರೆ ಇಡೀ ವ್ಯವಸ್ಥೆಯೇ ಕುಸಿಯಲು ಕಾರಣವಾಗಬಹುದು ಮತ್ತು ದೀರ್ಘಕಾಲದವರೆಗೆ ಈ ಕುಸಿತ ದಾಖಲಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಇಂತಹ ಸಮಯದಲ್ಲಿ ವಿವಿಧ ವಲಯಗಳಿಂದ ವಿವಿಧ ರೀತಿಯ ಬೇಡಿಕೆ ವ್ಯಕ್ತವಾಗುವುದು ಸಹಜ. ಆದರೆ ಈವೆರೆಗೆ ಸರ್ಕಾರ ಇಂತಹ ಯಾವುದೇ ಬೇಡಿಕೆಗಳಿಗೆ ಮಣಿದಿಲ್ಲ. ಇದರಿಂದ ವಿವಿಧ ವಲಯಗಳು ತಮ್ಮ ಬೆಂಬಲಕ್ಕೆ ನೆರವು ನೀಡಬೇಕು ಎಂದು ಕೋರಿದ್ದರೂ, ಅವುಗಳಿಗೆ ಮಣೆ ಹಾಕದೆ ಸರ್ಕಾರ ಸಮಚಿತ್ತ ಕಾಯ್ದುಕೊಂಡಿದೆ. ಆರ್ಥಿಕ ಹಿಂಜರಿತದಿಂದ ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆಯಾಗಿದೆ. ಅಂದರೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಕಂಪನಿಗಳು ಮತ್ತು ಕುಟುಂಬಗಳ ಮಧ್ಯೆ ಉತ್ತಮ ಸಮಚಿತ್ತವನ್ನು ಕಾಯ್ದುಕೊಂಡಿದೆ. ಇದೊಂದು ದೊಡ್ಡ ಮತ್ತು ಸಾಮಾನ್ಯ ತಪ್ಪನ್ನು ಸರ್ಕಾರ ಮಾಡಿದೆ. ಆದರೆ ಹೀಗೆ ಮಾಡುವುದರ ಬದಲಿಗೆ ಸದ್ಯದ ಅಗತ್ಯವನ್ನು ಸರ್ಕಾರ ಮನಗಾಣಬೇಕಿತ್ತು. ವೆಚ್ಚ ಮತ್ತು ಹೂಡಿಕೆಯನ್ನು ಎಚ್ಚರಿಕೆಯಿಂದ ಕ್ರೋಡೀಕರಿಸಬೇಕು. ಇದು ಭವಿಷ್ಯದಲ್ಲಿ ಆರ್ಥಿಕ ಪ್ರಗತಿಗೆ ಪೂರಕ ವಾತಾವರಣವನ್ನು ನಿರ್ಮಾಣ ಮಾಡುತ್ತದೆ. ಬಹುತೇಕ ರಾಜ್ಯ ಸರ್ಕಾರಗಳ ಆರ್ಥಿಕ ಸ್ಥಿತಿ ತುಂಬಾ ಕ್ಷೀಣ ಪರಿಸ್ಥಿತಿಯಲ್ಲಿದೆ. ಆದರೆ ಈ ರಾಜ್ಯ ಸರ್ಕಾರಗಳು ಉತ್ಪಾದಕವಲ್ಲದ ಸಬ್ಸಿಡಿ ಯೋಜನೆಗಳನ್ನು ಕೈಬಿಟ್ಟು ಉತ್ತಮ ಉತ್ಪಾದಕ ಯೋಜನೆಗಳನ್ನು ಜಾರಿಗೊಳಿಸುವುದಾಗಲೀ ಅಥವಾ ಬೊಕ್ಕಸಕ್ಕೆ ಹೊರೆಯಾಗುವ ಯೋಜನೆಗಳನ್ನು ನಿಲ್ಲಿಸುವ ಬಗ್ಗೆಯಾಗಲೀ ಉತ್ಸಾಹ ತೋರಿಸುವುದೂ ಇಲ್ಲ. ಹೀಗಾಗಿ ಕೇಂದ್ರ ಸರ್ಕಾರವೇ ಅತ್ಯಂತ ಯೋಚನಾ ಬದ್ಧವಾಗಿ ಮತ್ತು ಸ್ಮಾರ್ಟ್‌ ಆದ ವಿಧಾನದಲ್ಲಿ ಹೂಡಿಕೆ ಮಾಡಿ ಭವಿಷ್ಯದ ಅಗತ್ಯವನ್ನು ಯೋಚಿಸಬೇಕಾಗಿದೆ. ಜಿಎಸ್‌ಟಿ ದರಗಳ ಏರಿಕೆ ಮಾಡುವಂತೆ ರಾಜ್ಯಗಳು ಬೇಡಿಕೆ ತರುತ್ತಿದ್ದು, ರಾಜ್ಯಗಳ ಈ ಬೇಡಿಕೆಗೆ ಸರ್ಕಾರ ಮರುಳಾಗುವ ಅಗತ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರವು ಈ ಬೇಡಿಕೆಗೆ ಸಮ್ಮತಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಇದರ ಬದಲಿಗೆ ರಾಜ್ಯ ಸರ್ಕಾರಕ್ಕೆ ತಮ್ಮ ಬೊಕ್ಕಸವನ್ನು ಭದ್ರ ಮಾಡಿಕೊಳ್ಳುವಂತೆ ಸೂಚಿಸಬೇಕು. ಸಬ್ಸಿಡಿಗಳನ್ನು ಕಡಿಮೆ ಮಾಡುವಂತೆ ಸೂಚಸಿಬೇಕು. ಬಹುತೇಕ ಸಬ್ಸಿಡಿ ಸ್ಕೀಮ್‌ಗಳು ಮತ ಬ್ಯಾಂಕ್‌ ರಾಜಕೀಯಕ್ಕೆ ಘೋಷಣೆ ಮಾಡಿದ ಯೋಜನೆಗಳಾಗಿದ್ದು, ಇವು ಸಮಸ್ಯೆಯನ್ನು ಇನ್ನಷ್ಟು ದೊಡ್ಡದಾಗಿಸುತ್ತವೆಯೇ ಹೊರತು ಕಡಿಮೆಯನ್ನಂತೂ ಮಾಡುವುದಿಲ್ಲ.

ಭಾರತಕ್ಕೆ ಈಗ ಬೇಕಿರುವ ಅತ್ಯಂತ ಮಹತ್ವದ ಸಂಗತಿಯೆಂದರೆ ಒಂದು ಪರ್ಯಾಯ ವಿಧಾನಗಳ ಬಗ್ಗೆ ಯೋಚನೆ ಮಾಡಬೇಕಿದೆ. ಇಡೀ ದೇಶದ ಆರ್ಥಿಕ ಪ್ರಗತಿಯ ಹೊಸ ವಿಧಾನಗಳನ್ನು ದೇಶ ಕಂಡುಕೊಳ್ಳಬೇಕಿದೆ. ಹೀಗೆ ಮಾಡಿದಾಗ ಮಾತ್ರವೇ ಆರ್ಥಿಕ ಸ್ಥಿತಿಯನ್ನು ಹಳಿಗೆ ತರಬಹುದು. ಜಾಗತೀಕರಣದ ನಂತರ ಬಳಕೆ ಉತ್ತೇಜನಗೊಂಡ ಹೇಗೆ ಆರ್ಥಿಕ ಪ್ರಗತಿಗೆ ವೇಗ ಸಿಕ್ಕಿತ್ತೋ, ಅದೇ ರೀತಿಯ ವೇಗವನ್ನು ಪಡೆಯಲು ಸಾಧ್ಯವಿದೆ. ಭಾರತದ ಇತಿಹಾಸವನ್ನು ನೋಡಿದರೆ, ಪ್ರತಿಯೊಂದು ಹೊಸ ಆರ್ಥಿಕ ಹಂತಕ್ಕೆ ದೇಶ ಬದಲಾಗುತ್ತಿರುವಾಗಲೂ, ಹೊಸದೇ ಆದ ಉದ್ಯಮ ಪ್ರಗತಿ ಆಗಬೇಕಿರುತ್ತದೆ. 1970 ಮತ್ತು 1980ರಲ್ಲಿ ಉಂಟಾದ ಆರ್ಥಿಕ ಪ್ರಗತಿಯೂ ಇದಕ್ಕೆ ಸಾಕ್ಷಿ. ಆಗ ಸ್ವಲ್ಪ ಮಟ್ಟಿಗೆ ಆರ್ಥಿಕ ಪ್ರಗತಿ ನಡೆದಿದೆ ಎಂದಾದರೆ, ಅದು ಉದ್ಯಮಗಳಿಂದಲೇ ಆಗಿತ್ತು. ಆದರೆ 1990 ಮತ್ತು 2000ನೇ ಇಸ್ವಿಯಲ್ಲಿ ಈ ವಿಧಾನ ಸ್ವಲ್ಪ ಬದಲಾವಣೆ ಕಂಡಿತು. ಆಗ ಸೇವಾ ವಲಯ ಮಹತ್ವದ ಬದಲಾವಣೆಗೆ ಕಾರಣವಾಯಿತು. ಅದರಲ್ಲೂ ವಿಶೇಷವಾಗಿ ಮಾಹಿತಿ ತಂತ್ರಕ್ಞಾನ, ಟೆಲಿಕಾಂ ಮತ್ತು ಮಾಧ್ಯಮ ವಲಯ ಭಾರಿ ಪ್ರಗತಿ ಕಂಡಿತು. ಇದರಿಂದಾಗಿ ದೇಶದ ಆರ್ಥಿಕತೆಗೂ ಉತ್ತೇಜನ ಲಭ್ಯವಾಯಿತು. ಈ ವಲಯದ ಬೆಳವಣಿಗೆಯು ಸಹಜವಾಗಿಯೇ ಉದ್ಯಮದ ಪ್ರಗತಿಗೆ ಮತ್ತು ಇದರಿಂದಾಗಿ ಬ್ಯಾಂಕಿಂಗ್ ವಲಯದ ಚೇತರಿಕೆಗೆ ಕಾರಣವಾಯಿತು. ಆದರೆ ಆಗ ಸಾಲ ಆಧರಿತ ಬಳಕೆಯು ಆರ್ಥಿಕತೆಯನ್ನು ಉತ್ತೇಜಿಸಿತು. ಒಂದೆಡೆ ಇದರಿಂದ ಉದ್ಯೋಗ ಭಾರಿ ಪ್ರಮಾಣದಲ್ಲಿ ಸೃಷ್ಟಿಯಾದರೆ, ಇನ್ನೊಂದೆಡೆ ಸರ್ಕಾರಿ ಭಾರಿ ಆದಾಯವನ್ನು ತಂದುಕೊಟ್ಟು ಬೊಕ್ಕಸವನ್ನೂ ತುಂಬಿತು. ಈಗ ಈ ವಲಯಗಳು ಕೂಡ ಕುಂಟುತ್ತ ಸಾಗಿವೆ. ಹೀಗಾಗಿ ಹೊಸ ತಲೆಮಾರಿನ ಉದ್ಯಮಕ್ಕೆ ಸರ್ಕಾರ ಬೆಂಬಲ ನೀಡುವ ಅಗತ್ಯ ಎದುರಾಗಿದೆ. ಈ ಹೊಸ ಉದ್ಯಮಗಳು ಕೇವಲ ಹೆಚ್ಚು ಉತ್ಪಾದನೆಯನ್ನಷ್ಟೇ ಮಾಡುವುದಲ್ಲ. ಬದಲಿಗೆ ಇವು ದಕ್ಷವೂ ಆಗಿರಬೇಕು ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವೂ ಆಗಿದ್ದು, ಉತ್ಪಾದಕವೂ ಆಗಿರಬೇಕು. ಹೀಗಾದಾಗ ಮಾತ್ರ ಭಾರತದ ಉದ್ಯಮ ವಲಯಕ್ಕೆ ಭವಿಷ್ಯವಿದೆ ಮತ್ತು ದೇಶದ ಆರ್ಥಿಕತೆ ಸುಸ್ಥಿರವೂ ಆಗುತ್ತದೆ.

ಈ ಕೆಳಗಿನ ಅಂಶಗಳನ್ನು ಕೇಂದ್ರ ಸರ್ಕಾರ ಪ್ರಸ್ತುತ ಸನ್ನಿವೇಶದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಗೆ ಕೈಗೊಳ್ಳುವ ಅಗತ್ಯವಿದೆ:

  1. ಗಡಿಯಾರ ತುಂಬಾ ವೇಗದಲ್ಲಿ ತಿರುಗುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅತ್ಯಂತ ದಕ್ಷವಾಗಿ ಮತ್ತು ವಿವೇಚನೆಯಿಂದ ಖರ್ಚು ವೆಚ್ಚ ನಿಭಾಯಿಸಬೇಕು. ಸಾಲದ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲೇ ಇದೆ. ಒಂದೆಡೆ ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಸಾಲ ಪಡೆಯುತ್ತಿದೆ. ಅಂದರೆ ಪ್ರತಿ ತಿಂಗಳು ಅಂದಾಜು 1 ಲಕ್ಷ ಕೋಟಿ ರೂ. ದರದಲ್ಲಿ ಸಾಲ ಪಡೆಯುತ್ತಿದೆ. ಇನ್ನು ಎಲ್ಲ ರಾಜ್ಯಗಳು ಕೂಡ ಪ್ರತಿ ತಿಂಗಳು ಬಹುತೇಕ ರೂ. 50 ಸಾವಿರ ಕೋಟಿ ರೂ. ದರದಲ್ಲಿ ಸಾಲ ಪಡೆಯುತ್ತಿವೆ. ಸರ್ಕಾರದ ಕಂಪನಿಗಳು, ಟ್ರಸ್ಟ್‌ಗಳು ಮತ್ತು ಸಂಸ್ಥೆಗಳ ಸಾಲ ಇದಕ್ಕೆ ಸೇರಿಕೊಂಡಿಲ್ಲ. ಕೇವಲ ಸರ್ಕಾರದ ಮಟ್ಟದಲ್ಲಿ ಪಡೆದ ಸಾಲವನ್ನು ಮಾತ್ರ ಇದರಲ್ಲಿ ಸೇರಿಸಲಾಗಿದೆ. ಹೀಗಾಗಿ ಸರ್ಕಾರವು ಅತ್ಯಂತ ಸೂಕ್ಷ್ಮವಾಗಿ ಸಾಲವನ್ನು ನಿರ್ವಹಿಸಬೇಕು. ಯಾಕೆಂದರೆ ಈ ಪೈಕಿ ಬಹುತೇಕ ಸಾಲವನ್ನು ಸಾರ್ವಜನಿಕ ಸಂಸ್ಥೆಗಳು ಹೊಂದಿವೆ. ಅಂದರೆ ಬ್ಯಾಂಕ್‌ಗಳು, ವಿಮೆ ಕಂಪನಿಗಳು, ಮ್ಯೂಚುವಲ್‌ ಫಂಡ್‌ಗಳು ಇತ್ಯಾದಿಗಳು ಹೊಂದಿವೆ. ಸರ್ಕಾರದ ಒಟ್ಟು ಶೇ. 10 ರಷ್ಟು ಸಾಲವನ್ನು ವಿದೇಶೀಯರು ಅಥವಾ ವ್ಯಕ್ತಿಗಳು ಹೊಂದಿದ್ದಾರೆ. ಹೀಗಾಗಿ, ಯಾವುದೇ ಸಮಸ್ಯೆ ಎದುರಾದರೂ ಅದು ನೇರವಾಗಿ ಜನರಿಗೆ ಬಾಧಿಸುತ್ತದೆ. ಅದರಲ್ಲೂ ಮಧ್ಯಮ ವರ್ಗದ ಜನರು ಈ ಸಮಸ್ಯೆ ನೇರವಾಗಿ ತುತ್ತಾಗುತ್ತಾರೆ.
  2. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವಕರು ಕಾಲೇಜುಗಳಿಂದ ಹೊರಬಂದು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ದೊಡ್ಡ ಮೊತ್ತವನ್ನು ಸಬ್ಸಿಡಿಯ ಮೇಲೆ ಸರ್ಕಾರ ವೆಚ್ಚ ಮಾಡುವುದನ್ನು ಕಡಿಮೆ ಮಾಡಬೇಕು. ಇದರಿಂದ ಕೇವಲ ಉಚಿತ ಸರಕುಗಳನ್ನು ಜನರಿಗೆ ಕೊಡಲಾಗುತ್ತದೆಯೇ ಹೊರತು ಇದು ಉತ್ಪಾದಕತೆಯನ್ನು ಉತ್ತೇಜಿಸುವುದಿಲ್ಲ. ಇದಕ್ಕಾಗಿ ಸಾಲದ ಹಣವನ್ನೇ ಹೆಚ್ಚಾಗಿ ಸರ್ಕಾರ ಬಳಸಿಕೊಳ್ಳುತ್ತಿದೆ. ಇದು ಉತ್ಫಾದಕತೆ ಮತ್ತು ಆರ್ಥಿಕ ಪ್ರಗತಿಗೆ ಹೊರೆಯಾಗಿದೆ. ಎಲ್ಲವನ್ನೂ ಸರ್ಕಾರವೇ ಮಾಡಿ ಎಲ್ಲವನ್ನೂ ಉಚಿತವಾಗಿ ಸರ್ಕಾರವೇ ಕೊಡುವುದು ಸಾಧ್ಯವೇ ಇಲ್ಲ. ಹೀಗೆ ಉಚಿತವಾಗಿ ಕೊಡುವುದರ ಬದಲಿಗೆ ಭವಿಷ್ಯದ ಏಳ್ಗೆಗೆ ಸರ್ಕಾರ ಹೂಡಿಕೆ ಮಾಡಬೇಕು. ಹೊಸ ಉದ್ಯಮಗಳ ಬೆಳವಣಿಗೆಗೆ ಬೆಂಬಲ ನೀಡುವ ಮತ್ತು ಪ್ರೋತ್ಸಾಹ ನೀಡುವ ಹೊಸ ವ್ಯವಸ್ಥೆಯನ್ನು ಬೆಳೆಸಲು ಸರ್ಕಾರ ಮನಸು ಮಾಡಬೇಕು. ಇದರಿಂದ ಸಾಕಷ್ಟು ಸಂಖ್ಯೆಯ ಉದ್ಯೋಗ ಸೃಷ್ಟಿಯಾಗುತ್ತದೆ.
  3. ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಅಂಶವೆಂದರೆ ಎಲೆಕ್ಟ್ರಿಕಲ್ ವೆಹಿಕಲ್‌ (ಇ ವಿ) ಅಂದರೆ ವಿದ್ಯುಚ್ಛಕ್ತಿಯಿಂದ ಚಲಿಸುವ ವಾಹನ ವ್ಯವಸ್ಥೆಯನ್ನು ವಾಹನ ಉದ್ಯಮದಲ್ಲಿ ರೂಪಿಸುವುದಾಗಿದೆ. ಇದಕ್ಕಾಗಿ ಮೂಲಸೌಕರ್ಯದ ಮೇಲೆ ಭಾರಿ ವೆಚ್ಚ ಮಾಡುವ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ ನೀರು ಸಂಗ್ರಹದಂತಹ ವಿಚಾರದಲ್ಲಿ ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ.
  4. ಅತ್ಯಂತ ಪ್ರಮುಖ ಅಗತ್ಯ ಬದಲಾವಣೆ ಅಥವಾ ತುರ್ತು ಅಗತ್ಯದ ಪರ್ಯಾಯ ಎಂದರೆ ಮುಂದಿನ ಒಂದು ಅಥವಾ ಎರಡು ವರ್ಷಗಳವರೆಗೆ ಸಬ್ಸಿಡಿಯ ಮೇಲೆ ಸರ್ಕಾರ ಮಾಡುತ್ತಿರುವ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬೇಕು. ಹೀಗೆ ಸಬ್ಸಿಡಿಯ ಮೇಲೆ ಸರ್ಕಾರದ ವೆಚ್ಚವನ್ನು ಕಡಿಮೆ ಮಾಡಿ ಈ ಹಣವನ್ನೇ ಬಳಸಿಕೊಂಡು ಮಹತ್ವದ ಸುಧಾರಣೆಗೆ ವೆಚ್ಚ ಮಾಡಬೇಕು. ಬ್ಯಾಂಕ್‌ಗಳ ಎಲ್ಲ ಮರುಪಾವತಿಯಾಗದ ಸಾಲವನ್ನು ತಾನು ವಹಿಸಿಕೊಳ್ಳಬೇಕು ಮತ್ತು ಬ್ಯಾಂಕ್‌ಗಳ ಕಾರ್ಯನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ಮಾಡಬೇಕು. ಇದರಿಂದ ಆರ್ಥಿಕತೆ ಶೀಘ್ರದಲ್ಲಿ ಸುಧಾರಿಸಿಕೊಳ್ಳಲು ಅನುವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಈ ಮೇಲೆ ಹೇಳಿದ ಮಹತ್ವದ ಕ್ರಮಗಳನ್ನು ಕೈಗೊಂಡರೆ ಸರ್ಕಾರಕ್ಕೆ ಭಾರಿ ಹೊರೆ ಉಂಟಾಗುವುದಂತೂ ಸತ್ಯ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 10-12 ಲಕ್ಷ ಕೋಟಿ ರೂ. ಹೊರೆಯಾಗುತ್ತದೆ. ಆದರೆ ಇದು ಒಂದು ರೀತಿಯ ಮಹತ್ವದ ಸರ್ಜರಿಯಾಗುತ್ತದೆ. ಆರ್ಥಿಕತೆಗೆ ಈ ಸಮಯದಲ್ಲಿ ಇಂಥ ಚಿಕಿತ್ಸೆ ಅಗತ್ಯವಿದೆ. ನಂತರ ಸರ್ಕಾರವು ಈ ಸಾಲಗಳನ್ನು ವಸೂಲಿ ಮಾಡಬಹುದು. ಆದರೆ ಇಂತಹ ಸುಧಾರಣೆಗೆ ದೊಡ್ಡ ಮಟ್ಟದ ರಾಜಕೀಯ ಇಚ್ಛಾಶಕ್ತಿ ಅಗತ್ಯವಿರುತ್ತದೆ.
  5. ಸದ್ಯಕ್ಕೆ ಸರ್ಕಾರದ ಬೆಂಬಲವನ್ನು ಬಯಸುತ್ತಿರುವ ಮಹತ್ವದ ವಲಯ ಎಂದರೆ ಅದು ಟೆಲಿಕಾಂ ವಲಯ. ಈ ವಲಯಕ್ಕೆ ಸರ್ಕಾರ ಅಗತ್ಯ ಸಬ್ಸಿಡಿಯನ್ನು ಒದಗಿಸಬೇಕು. ಇದರಿಂದ ಭವಿಷ್ಯದ 5ಜಿ ರೀತಿಯ ತಂತ್ರಜ್ಞಾನವನ್ನು ದೇಶಕ್ಕೆ ಸುಲಭವಾಗಿ ಲಭ್ಯವಾಗುತ್ತದೆ ಮತ್ತು ಇದರಲ್ಲಿ ಟೆಲಿಕಾಂ ವಲಯ ಹೂಡಿಕೆ ಮಾಡಲು ಶಕ್ತವಾಗುತ್ತದೆ. ಈ ಮೂಲಕ ಭಾರತದ ಎಲ್ಲ ವಲಯದ ಉದ್ಯಮವೂ ಜಾಗತಿಕ ಮಟ್ಟದಲ್ಲಿ ಸ್ಫರ್ಧಾತ್ಮಕತೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತವೆ ಮತ್ತು ಹೆಚ್ಚು ಉತ್ಪಾದಕವೂ ಆಗುತ್ತವೆ.
  6. ಮುದ್ರಾ ಸಾಲ, ಸೂಕ್ಷ್ಣಹಣಕಾಸು ಸಾಲ ಇತ್ಯಾದಿ ಸ್ಕೀಮ್‌ಗಳಲ್ಲಿ ಹಣ ವೆಚ್ಚ ಮಾಡುವುದನ್ನು ನಿಲ್ಲಿಸಿ. ಇದರ ಬದಲಿಗೆ ಭವಿಷ್ಯದಲ್ಲಿ ದೇಶಕ್ಕೆ ಯಾವ ತಂತ್ರಜ್ಞಾನ ಅಗತ್ಯವಿದೆಯೋ ಅದರ ಮೇಲೆ ಹೂಡಿಕೆ ಮಾಡುವುದು ಹಾಗೂ ಬೆಂಬಲಿಸುವ ಕೆಲಸವನ್ನು ಮಾಡಿ. ನೆಟ್‌ವರ್ಕ್‌ ಸೆಕ್ಯುರಿಟಿ ಆರ್ಕಿಟೆಕ್ಚರ್‌ಗೆ ಹೂಡಿಕೆ ಮಾಡುವುದು,ಬೌದ್ಧಿಕ ಸ್ವತ್ತುಗಳಲ್ಲಿ ಹೂಡಿಕೆ ಮಾಡುವವರಿಗೆ ಬೆಂಬಲಿಸುವುದು, ಆರ್ಟಿಫಿಶಿಯಲ್ ಇಂಟಲಿಜೆನ್ಸ್‌, ಮಶಿನ್ ಲರ್ನಿಂಗ್‌, ಸುಧಾರಿತ ವೈದ್ಯಕೀಯ ವಿಜ್ಞಾನದ ವಲಯಗಳನ್ನು ಬೆಂಬಲಿಸಬೇಕು. ಚೀನಾ ಕೂಡ ಇದೇ ಮಾದರಿಯನ್ನು ಅನುಸರಿಸಿದೆ.
  7. ವಿಪತ್ತಿನ ಸನ್ನಿವೇಶವನ್ನು ಎಂದಿಗೂ ಹಾಳು ಮಾಡಿಕೊಳ್ಳಬಾರದು. ಅದರ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತಗಳು ಉತ್ಪಾದಕ ಯೋಜನೆಗಳನ್ನು ಪರಿಚಯಿಸಿದರೆ ಮಾತ್ರ ಅದಕ್ಕೆ ಅಗತ್ಯ ನೆರವನ್ನು ಕೇಂದ್ರ ಸರ್ಕಾರ ಮಾಡಬೇಕು. ಉದಾಹರಣೆಗೆ ಸರ್ಕಾರಿ ಸೇವೆಗಳು ಮತ್ತು ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯಂತಹ ಯೋಜನೆಗಳಿಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೆರವು ನೀಡಬೇಕು.

ಡಾ. ಎಸ್‌. ಅನಂತ್‌

ABOUT THE AUTHOR

...view details