ಭಾನುವಾರ ಮಧ್ಯಾಹ್ನ ಯಾರೂ ಊಹಿಸಿರದ ಒಂದು ದುರದೃಷ್ಟಕರ ಸುದ್ದಿಯೊಂದು ಬಂದೇ ಬಿಟ್ಟಿತ್ತು. ಬಾಲಿವುಡ್‌ನ ಅತ್ಯಂತ ಜನಪ್ರಿಯ ಹೊಸ ಪೀಳಿಗೆಯ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿದ್ದರು. ಮುಂಬೈ ನಗರದ ಅವರ ಫ್ಲ್ಯಾಟ್‌ನಲ್ಲಿ ಸುಶಾಂತ್‌ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರುದಿನದ ವೇಳೆಗೆ, ಇದು ಆತ್ಮಹತ್ಯೆ ಪ್ರಕರಣ ಎಂದು ಮರಣೋತ್ತರ ಪರೀಕ್ಷೆ ದೃಢಪಡಿಸಿದೆ.
ಚಿತ್ರರಂಗದಲ್ಲಿ ಭರವಸೆಯ ಭವಿಷ್ಯ ಹೊಂದಿದ್ದ 34 ವರ್ಷದ ನಟನ ಜೀವನ ಮೊಟಕುಗೊಂಡಿದೆ. ಆಗಿರುವುದನ್ನ ಬದಲಾವಣೆ ಮಾಡಲು ಎಂದಿಗೂ ಸಾಧ್ಯವಿಲ್ಲ. ಆದರೆ, ನಿಜವಾಗಿಯೂ ಬದಲಾಗಬೇಕಾದ್ದು, ಆತ್ಮಹತ್ಯೆ ಪ್ರಕರಣಗಳನ್ನ ಮಾಧ್ಯಮಗಳು ವರದಿ ಮಾಡುವ ರೀತಿ.
ಹೌದು, ಸುಶಾಂತ್‌ಸಿಂಗ್ ರಜಪೂತ್ ಆತ್ಮಹತ್ಯೆ ಸುದ್ದಿ ಬರುತ್ತಿದ್ದಂತೆ ಟಿವಿ ಚಾನಲ್‌ಗಳು ಈ ದಿನದ ಬಹುದೊಡ್ಡ ʻಬಿಗ್ ಬ್ರೇಕಿಂಗ್ʼ ನ್ಯೂಸ್ ಎಂದು ಸುದ್ದಿ ಪ್ರಸಾರ ಮಾಡಲು ಆರಂಭಿಸಿದವು. ಒಬ್ಬ ಖ್ಯಾತ ನಟ, ಪಕ್ಕದ ಮನೆ ಹುಡುಗನಂತಿದ್ದ ವ್ಯಕ್ತಿ ಚಿಕ್ಕ ವಯಸ್ಸಿನಲ್ಲೆ ಪ್ರಾಣ ಕಳೆದುಕೊಂಡನಲ್ಲ ಎಂಬ ಮರುಕದಿಂದ ಸುದ್ದಿ ಪ್ರಸಾರ ಮಾಡುವ ಬದಲು ಆತ್ಮಹತ್ಯೆ ಸುದ್ದಿ ಸೆನ್ಸೇಶನ್ ಮಾಡುವುದರಲ್ಲೇ ಕಾಲ ಕಳೆದಿವೆ. ಹೆಚ್ಚಿನ ನ್ಯೂಸ್ ಚಾನಲ್‌ಗಳು ಸುಶಾಂತ್ ಹೇಗೆ ತಮ್ಮನ್ನು ಕಳೆದುಕೊಂಡರು ಎಂಬ ಬಗ್ಗೆ ಇಡೀ ದಿನ ವಿವರಣೆ, ತಮ್ಮದೇ ವಿಶ್ಲೇಷಣೆ ಮೂಲಕ ಕಾಲ ಕಳೆದಿವೆ. ಅದು ಎಷ್ಟರಮಟ್ಟಿಗೆ ಎಂದರೆ, ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಬೆಡ್ ರೂಮ್ ಬಾಗಿಲು ಒಡೆದು ತೆರೆದಾಗ ನೇತಾಡುತ್ತಿದ್ದ ಮೃತ ದೇಹದ ಬಟ್ಟೆಯ ಬಣ್ಣ ಸೇರಿದಂತೆ ತರಹೇವಾರಿ ವರದಿಗಳು ವೀಕ್ಷಕರ ಮುಂದೆ ಬಂದು ಕೂತಿದ್ದವು. ಶವವನ್ನು ಫ್ಲ್ಯಾಟ್‌ನಿಂದ ಹೊರತೆಗೆಯುತ್ತಿದ್ದಂತೆ ಬಹುತೇಕ ನ್ಯೂಸ್ ಚಾನಲ್‌ಗಳು ನೇರ ಪ್ರಸಾರ ಆರಂಭಿಸಿದವು ಮತ್ತು ಮತ್ತೊಂದು ಕಡೆ ಮೃತದೇಹ ಕಂಡು ಪಾಟ್ನಾದಲ್ಲಿದ್ದ ಸುಶಾಂತ್‌ಕುಟುಂಬ ಸದಸ್ಯರು ರೋಧಿಸುತ್ತಿದ್ದ ದೃಶ್ಯವನ್ನ ತೋರಿಸಲಾಗುತ್ತಿತ್ತು. ಇದಕ್ಕಿಂತ ಅತ್ಯಂತ ಕೆಟ್ಟ ನಡವಳಿಕೆ ಎಂದರೆ, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ಹಿಂದಿನ ಕಾರಣವನ್ನು ಕೆಟ್ಟದಾಗಿ ತೆರೆ ಮೇಲೆ ಉಲ್ಲೇಖಿಸಲಾಗುತ್ತಿತ್ತು. ಗೆಳತಿಯೊಂದಿಗೆ ಬ್ರೇಕಪ್ ಆಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ, ಸುಶಾಂತ್ ಪ್ರೊಫೆಶನಲ್ ವೈಫಲ್ಯ ಕಾರಣ ಇರಬಹುದೇ. ನಟ ಸುಶಾಂತ್ ಖಿನ್ನತೆಯಿಂದ ಬಳಲುತ್ತಿದ್ದಾನೆ ಮತ್ತು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವೀಕ್ಷಕರಿಗೆ ತಿಳಿಸುವವರೆಗೂ ಸುದ್ದಿ ಪ್ರಸಾರ ಮಾಡಲಾಯಿತು.
ನಿರೀಕ್ಷೆಯಂತೆ, ಬೆಳಗ್ಗೆ ದಿನ ಪತ್ರಿಕೆಗಳು ಸಹ ನಟನ ಚಿತ್ರ ಮತ್ತು ಅಮೂಲ್ಯವಾದ ಜೀವನವನ್ನು ಆತ್ಮಹತ್ಯೆ ಮೂಲಕ ಕೊನೆಗೊಳಿಸಿದ ಕೃತ್ಯದ ಬಗ್ಗೆ ವಿವರಗಳೊಂದಿಗೆ ಸಂಪೂರ್ಣ ಸ್ಟೋರಿ ಒಳಗೊಂಡ ವರದಿಯನ್ನ ಮುಖಪುಟದಲ್ಲಿ ಮುದ್ರಿಸಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಹಿಂದೆ ಬಿದ್ದ ಎಲೆಕ್ಟ್ರಾನಿಕ್ ಮಾಧ್ಯಮಗಳನ್ನ ದೂಷಿಸುವುದು ಮಾತ್ರವಲ್ಲ. ದಿನ ಪತ್ರಿಕೆಗಳು ಸಹ ಅತ್ಯಂತ ರೋಚಕ. ಆಳ ವಿವರಗಳನ್ನ ಹೆಕ್ಕಿ ತೆಗೆದು ಅವುಗಳನ್ನು ಮುದ್ರಣ ಮಾಡಲು ತಮ್ಮೊಳಗೆ ತಾವು ಪರಸ್ಪರ ಸ್ಪರ್ಧೆಗೆ ಇಳಿದಿವೆ.
ಸುದ್ದಿ ಪ್ರಸಾರ ಮಾಡಲು ಪ್ರಾಮುಖ್ಯತೆ ಕೊಡಬೇಕು ನಿಜ. ನಿಸ್ಸಂದೇಹವಾಗಿ ಪ್ರಾಮುಖ್ಯತೆ ಕೊಡಬೇಕು. ಆದರೆ, ಆತ್ಮಹತ್ಯೆ ಸುದ್ದಿ ಅತಿ ಹೆಚ್ಚು ಹೈಲೈಟ್ ಮಾಡಲು ಅರ್ಹವಾಗಿದೆಯೇ? ಪ್ರಾಥಮಿಕ ಹಂತದಲ್ಲಿ ಇದನ್ನ ಮಾಡುವುದು ಎಂದು ಹೇಳಬಹುದು, ಆದರೆ, ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತದೆ ಎಂದಾಗ ಮಿತಿ ಇರಬೇಕು. ಪದೇ ಪದೇ ಆತ್ಮಹತ್ಯೆ ಪ್ರಕರಣದ ಬಗ್ಗೆ ಅತ್ಯಂತ ರೋಚಕವಾಗಿ ಸುದ್ದಿ ಪ್ರಸಾರ ಮಾಡುವುದರಿಂದ ಅದು ಅನೇಕರನ್ನು, ಅದೇ ರೀತಿಯ ಆತ್ಮಹತ್ಯೆಯ ಹಾದಿ ಹಿಡಿಯಲು ಪ್ರೇರೇಪಿಸುತ್ತದೆ ಎಂಬುದನ್ನ ಮರೆಯಬಾರದು.
ವಿಶ್ವಾದ್ಯಂತ ನಡೆದಿರುವ 50ಕ್ಕೂ ಹೆಚ್ಚು ಸಂಶೋಧನೆಗಳ ಪ್ರಕಾರ ಆತ್ಮಹತ್ಯೆಯ ಸುದ್ದಿ ಪ್ರಸಾರವು ದುರ್ಬಲ ವ್ಯಕ್ತಿಗಳಲ್ಲಿ ಆತ್ಮಹತ್ಯೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇದು ಪ್ರಸಾರದ ಪ್ರಮಾಣ, ಅವಧಿ ಮತ್ತು ಪ್ರಾಮುಖ್ಯತೆಯನ್ನು ಅವಲಂಬಿಸಿರುತ್ತದೆ ಎನ್ನುತ್ತವೆ ವರದಿಗಳು. ಮನಸ್ಸು ದುರ್ಬಲ ವ್ಯಕ್ತಿಗಳು ಅಂದರೆ ಈಗಾಗಲೇ ಆತ್ಮಹತ್ಯೆ ಬಗ್ಗೆ ಚಿಂತನೆ ಮಾಡುತ್ತಿರುವ ಜನರು ಮಾಧ್ಯಮಗಳಲ್ಲಿ ಪ್ರಸಾರ ಅಥವಾ ಪ್ರಕಟವಾಗುವ ಆತ್ಮಹತ್ಯೆ ಸುದ್ದಿಗಳನ್ನ ನೋಡಿ ಅದರಿಂದ ಪ್ರೇರೇಪಿತರಾಗಿ ಅದನ್ನೇ ಕಾಪಿ ಮಾಡಲು ಪ್ರಭಾವ ಬೀರಬಹುದು. ಸೆಲೆಬ್ರಿಟಿಗಳ ಆತ್ಮಹತ್ಯೆ ಪ್ರಕರಣಗಳನ್ನ ಸೆನ್ಸೇಷನ್ ಮಾಡಿ ಪ್ರಸಾರ ಮಾಡುವುದರಿಂದ ದುರ್ಬಲ ವ್ಯಕ್ತಿಗಳನ್ನ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಏಕೆಂದರೆ, ಸೆಲೆಬ್ರಿಟಿಗಳೇ ಆತ್ಮಹತ್ಯೆ ಮಾಡಿಕೊಂಡಿರುವಾಗ ನಾವೇಕೆ ಮಾಡಿಕೊಳ್ಳಬಾರದು ಅದೇ ಸರಿ ಇರಬಹುದು ಎಂಬ ಭಾವನೆ ಅವರಲ್ಲಿ ಮೂಡಲು ಕಾರಣವಾಗುತ್ತದೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡರೆ ತಕ್ಷಣ ಸೆಲೆಬ್ರಿಟಿ ಆಗಿಬಿಡುತ್ತೇವೆ ಎಂಬ ಭಾವನೆ ಮೂಡಬಹುದು. ಮಾಧ್ಯಮಗಳಲ್ಲಿ ಆತ್ಮಹತ್ಯೆಯ ಸುದ್ದಿಗಳನ್ನ ಹೆಚ್ಚು ಪ್ರಸಾರ ಮಾಡುವುದರಿಂದ ಆತ್ಮಹತ್ಯೆ ಪ್ರಮಾಣ 2.5 ಪಟ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆ ವರದಿ ಹೇಳುತ್ತದೆ. ಇದನ್ನ 'ಕಾಪಿಕ್ಯಾಟ್ ಸೂಸೈಡ್ಸ್ 'ಎಂದು ಉಲ್ಲೇಖ ಮಾಡಲಾಗಿದ್ದು, ಸೆಲೆಬ್ರಿಟಿಗಳ ಆತ್ಮಹತ್ಯೆಯ ನಂತರ ಆತ್ಮಹತ್ಯೆ ಪ್ರಮಾಣವು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಎಂದು ಸಾಬೀತಾಗಿದೆ. ಇದರ ಜೊತೆಗೆ ಸ್ವಲ್ಪ ಮಟ್ಟಿಗೆ ರಾಜಕೀಯ ವ್ಯಕ್ತಿಗಳು ಮತ್ತು ಅವರು ಸಮೂಹ ಮಾಧ್ಯಮಗಳಲ್ಲಿ ಪಡೆಯುವ ಪ್ರಚಾರ ಸೇರಿದಂತೆ ಇವೇ ಮುಂತಾದ ಸಂದರ್ಭಗಳು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ ಎನ್ನುತ್ತದೆ ಸಂಶೋಧನೆ ವರದಿ.
ಇನ್ನೊಂದು ಬದಿಯಲ್ಲಿ, ಆತ್ಮಹತ್ಯೆ ತಡೆಗಟ್ಟುವಲ್ಲಿ ಮಾಧ್ಯಮಗಳು ವಹಿಸಬಹುದಾದ ಸಕಾರಾತ್ಮಕ ಪಾತ್ರದ ಬಗ್ಗೆ ಸಹ ಹೆಚ್ಚಿನ ಪುರಾವೆಗಳು ಇವೆ. ಬಿಕ್ಕಟ್ಟುಗಳಿಗೆ ಆತ್ಮಹತ್ಯೆಯಲ್ಲದ ಪರ್ಯಾಯ ಮಾರ್ಗಗಳನ್ನು ತೋರಿಸುವ ಸುದ್ದಿ ಪ್ರಸ್ತುತಪಡಿಸುವ ಮೂಲಕ ಸಮೂಹ ಮಾಧ್ಯಮಗಳು ಉಂಟುಮಾಡಬಹುದು ಎಂಬುವುದೇ 'ಪಾಪಜೆನೊ ಅಧ್ಯಯನ’. ಆತ್ಮಹತ್ಯೆ ಸುದ್ದಿಯನ್ನು ಸೆನ್ಸೇಶನ್ ಮಾಡಿ ವರದಿ ಮಾಡುವುದನ್ನ ತಗ್ಗಿಸಿ, ಆತ್ಮಹತ್ಯೆಗೆ ಪ್ರೇರೇಪಿಸುತ್ತಿರುವ ಕಠಿಣ ಸಂದರ್ಭದಲ್ಲಿ ಆ ಸಮಸ್ಯೆಯಿಂದ ಹೊರಬರಲು ಸೂಕ್ತವಾದ ಮಾರ್ಗಗಳ ಕುರಿತು ಗರಿಷ್ಠ ವರದಿ ಮಾಡುವ ಮೂಲಕ ಮಾಧ್ಯಮಗಳು ಆತ್ಮಹತ್ಯೆ ತಡೆಗಟ್ಟುವಿಕೆಗೆ ಬಹಳ ಪ್ರಮಾಣದ ಕೊಡುಗೆಯನ್ನು ನೀಡಬಹುದು.
ನಿಜವಾಗಿ ನೋಡುವುದಾದರೆ ಆತ್ಮಹತ್ಯೆಗಳ ಹಿಂದೆ ಕೇವಲ ಒಂದೇ ಕಾರಣ ಇರುವುದಿಲ್ಲ. ಹೆಚ್ಚಾಗಿ, ಖಿನ್ನತೆ/ಒತ್ತಡದಿಂದ ತೀವ್ರ ಮಾನಸಿಕ ಕಾಯಿಲೆಗಳಿಂದ ಉಂಟಾಗುವ ಮಾನಸಿಕ ಅಸ್ವಸ್ಥತೆಯ ಪರಿಣಾಮವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಗೆ ಬರುತ್ತಾರೆ. ಕೆಲವೊಮ್ಮೆ ಇದು ಆನುವಂಶಿಕ ಇರುವ ಸಾಧ್ಯತೆ ಇರುತ್ತದೆ ಅಥವಾ ಕುಟುಂಬದಲ್ಲಿ ಆತ್ಮಹತ್ಯೆಗಳ ಇತಿಹಾಸವಿರುವ ಸಾದ್ಯತೆ ಇದೆ. ಮಾನಸಿಕ ಅಸ್ವಸ್ಥತೆಗಳನ್ನು ಸರಿಪಡಿಸಿದರೆ ಆತ್ಮಹತ್ಯೆ ತಡೆಯಬಹುದು. ಬೇರೆ ಕಾಯಿಲೆ ರೀತಿಯೇ ಮಾನಸಿಕ ಅಸ್ವಸ್ಥತೆಯೂ ಒಂದು ಅನಾರೋಗ್ಯ ಎಂದು ಒಪ್ಪಿಕೊಳ್ಳಬೇಕು ಮತ್ತು ಪ್ರತಿಯೊಬ್ಬರಿಗೂ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ದೊರೆಯುವುದಾದರೆ ಆತ್ಮಹತ್ಯೆಗಳಂತಹ ಸಮಸ್ಯೆ ತಡೆಯಬಹುದು. ಆತ್ಮಹತ್ಯೆ ಸಮಸ್ಯೆ ಹೊಂದಿರುವ ಜನರ ಜೊತೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸುವುದರಿಂದ ಅವನ/ಅವಳ ನಿರ್ಧಾರವನ್ನು ಬದಲಾಯಿಸಬಹುದು. ಅದರಲ್ಲೂ ಮಾನಸಿಕ ಅಸ್ವಸ್ಥರು ಹುಚ್ಚರೆಂಬ ತಪ್ಪು ತಿಳುವಳಿಕೆ ಜನರಲ್ಲಿದೆ. ಈ ತಪ್ಪು ತಿಳುವಳಿಕೆ ದೂರವಾಗಬೇಕಿದೆ. ಮಾನಸಿಕ ಅಸ್ವಸ್ಥರು ಹುಚ್ಚರಲ್ಲ ಎಂಬುದನ್ನ ಅರಿಯಬೇಕಿದೆ.