ಚೆನ್ನೈ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 ಹಿಂಪಡೆದ ಕುರಿತು ಗೃಹ ಸಚಿವ ಅಮಿತ್ ಶಾ ಸಮರ್ಥಿಸಿಕೊಂಡು, 'ವಿಶೇಷ ಸ್ಥಾನಮಾನ ವಾಪಸ್ ಪಡೆದಿದ್ದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಅಂತ್ಯವಾಗಲಿದೆ ಮತ್ತು ಅಲ್ಲಿ ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಲಿವೆ' ಎಂದರು.
ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ 'ಲಿಸನಿಂಗ್, ಲರ್ನಿಂಗ್ ಅಂಡ್ ಲೀಡಿಂಗ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ದೇಶಕ್ಕೆ ಪ್ರಯೋಜನಕಾರಿಯಲ್ಲದ ಕಾರಣ ಅದನ್ನು ತೆಗೆದುಹಾಕಬೇಕು ಎಂಬುದು ನನ್ನ ದೃಢ ನಂಬಿಕೆ ಆಗಿದೆ ಎಂದು ಹೇಳಿದರು.
ಆರ್ಟಿಕಲ್ 370ಅನ್ನು ತೆಗೆದುಹಾಕಬೇಕು ಎಂಬುದು ನನ್ನ ದೃಢವಾಗಿ ನಂಬಿದೆ. ಅಂತೆಯೇ ಅದನ್ನು ತೆಗೆದುಹಾಕಿದ್ದೇವೆ. ಆರ್ಟಿಕಲ್ 370 ರದ್ದಾದ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಗೊಳ್ಳುತ್ತದೆ ಮತ್ತು ಕಣಿವೆ ರಾಜ್ಯ ಅಭಿವೃದ್ಧಿ ಪಥದಲ್ಲಿ ಮುಂದುವರಿಯಲಿದೆ ಎಂದು ಶಾ ಅಭಿಪ್ರಾಯಪಟ್ಟರು.
ವೆಂಕಯ್ಯ ನಾಯ್ಡು ಬರೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ ರಾಜ್ಯಸಭೆಯ ಉಪಾಧ್ಯಕ್ಷರಾಗಿ ಮತ್ತು ಅಧ್ಯಕ್ಷರಾಗಿ 370ನೇ ವಿಧಿಯನ್ನು ರದ್ದುಪಡಿಸುವ ಬಗ್ಗೆ ಕಾನೂನು ಪರಿಚಯಿಸಿದಾಗ ಅವರು (ವೆಂಕಯ್ಯನಾಯ್ಡು) ಮೇಲ್ಮನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಆದರೆ, ಮಸೂದೆಯನ್ನು ಮಂಡಿಸುವ ಮುನ್ನ ಯಾವಾಗ ಪರಿಚಯಿಸುತ್ತೇನೆ, ಹೇಗೆ ಕಾರ್ಯನಿರ್ವಹಿಸುತ್ತೇನೆ ಎಂಬುದರ ಬಗ್ಗೆ ಸಾಕಷ್ಟು ಆತಂಕವಿತ್ತು. ಮೇಲ್ಮನೆ ಹೇಗೆ ಕಾರ್ಯನಿರ್ವಹಿಸುತ್ತದೆ? ರಾಜ್ಯಸಭೆಯಲ್ಲಿ ನಮಗೆ ಪೂರ್ಣ ಬಹುಮತವಿಲ್ಲ. ಆದರೂ ನಾನು ರಾಜ್ಯಸಭೆಯಲ್ಲಿ ಮಸೂದೆಯನ್ನು ಮೊದಲು ಪರಿಚಯಿಸಲು ನಿರ್ಧರಿಸಿದೆ ಎಂದು ಶಾ ಹೇಳಿದರು.
ಮಸೂದೆ ಮಂಡನೆಯ ವೇಳೆ ಏನಾದರು ಸಂಭವಿಸಿದರೆ ಅಪಖ್ಯಾತಿಯ ಭಾಗವಾಗಬೇಕಾಗುತ್ತದೆ ಎಂಬ ಆತಂಕ ನನ್ನ ಹೃದಯದಲ್ಲಿತ್ತು. ಅಂತಹ ಭಯ ಮತ್ತು ಭಾವನೆಗಳೊಂದಿಗೆ ನಾನು ರಾಜ್ಯಸಭೆಯಲ್ಲಿ ನಿಂತು ಆರ್ಟಿಕಲ್ 370 ಹಿಂದಕ್ಕೆ ತೆಗೆದುಕೊಳ್ಳಬೇಕಾಯಿತು. ವೆಂಕಯ್ಯ ನಾಯ್ಡು ಅವರ ನಿರ್ದೇಶನಗಳು, ವಿರೋಧ ಪಕ್ಷದಲ್ಲಿನ ಸ್ನೇಹಿತರ ಅಭಿಪ್ರಾಯಗಳನ್ನು ಕೇಳಿ ಮತಗಳ ವಿಭಜನೆ ಆಗದಂತೆ ಹಾಗೂ ಮೇಲ್ಮನೆಯ ಘನತೆಯನ್ನು ಕಡಿಮೆ ಆಗದಂತೆ ನೋಡಿಕೊಂಡಿದ್ದೇನೆ ಎಂದು ಮಸೂದೆ ವೇಳೆಯಲ್ಲಿನ ಆತಂಕದ ಕ್ಷಣಗಳನ್ನು ಹಂಚಿಕೊಂಡರು.