ಕರ್ನಾಟಕ

karnataka

ETV Bharat / bharat

ವಿಜ್ಞಾನ ನಿರಾಕರಣೆ ಎಂಬ ಮತ್ತೊಂದು ಜಾಗತಿಕ ಸೋಂಕು!

ಕಾವೇರಿ ಬಮ್ಜೈ ಅವರು ಇಂಡಿಯಾ ಟುಡೆ ಮಾಜಿ ಸಂಪಾದಕಿ. ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಇಂಡಿಯನ್ ಎಕ್ಸ್ ಪ್ರೆೇಸ್​ನಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ. ಚೆವೆನಿಂಗ್ ವಿದ್ಯಾರ್ಥಿವೇತನ ಪಡೆದ ಪ್ರತಿಭಾನ್ವಿತ ಪತ್ರಕರ್ತೆ. ಬಾಲಿವುಡ್ ಟುಡೆ ಮತ್ತು ವುಮೆನ್ ಇನ್ ಇಂಡಿಯನ್ ಫಿಲ್ಮ್ ಕುರಿತ ಜುಬಾನ್ ಸರಣಿಯ ಎರಡು ಮೊನೊಗ್ರಾಫ್‌ಗಳ ಲೇಖಕಿ. ಮಹಿಳಾ ಸಬಲೀಕರಣಕ್ಕಾಗಿ ಮೀಸಲಾದ ಸಿಐಐ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿದ್ದಾರೆ ಮತ್ತು ಮಾಧ್ಯಮ ಕ್ಷೇತ್ರದ ವೇದಿಕೆಗಳಲ್ಲಿ ಅವರ ಮಾತು ಸದಾ ಕೇಳಿಬರುತ್ತಲೇ ಇರುತ್ತದೆ.

Rejection of science and corona virus
ವಿಜ್ಞಾನ ನಿರಾಕರಣೆ ಮತ್ತು ಕೊರೊನಾ ವೈರಸ್​

By

Published : Apr 30, 2020, 10:19 AM IST

ಕೊರೊನಾ ವೈರಸ್​ಗೆ ಮದ್ದಾಗಿ ಸೋಂಕು ನಿವಾರಕವನ್ನು ಸೇವಿಸಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಹಾಗೆ ಹೇಳುತ್ತಲೇ ಅವರು ವಿಜ್ಞಾನವನ್ನು ನಿರಾಕರಿಸುವ ನಾಯಕರ ಬಹುದೊಡ್ಡ ಸಾಲಿಗೆ ಸೇರಿಬಿಟ್ಟರು. ಸೂರ್ಯನ ಸುತ್ತ ಭೂಮಿ ಸುತ್ತುತ್ತದೆ ಎಂದು ಹೇಳಿ ರೋಮನ್ ಕ್ಯಾಥೋಲಿಕ್ ಚರ್ಚಿನ ಕೆಂಗಣ್ಣಿಗೆ ಗುರಿಯಾದ; ಧರ್ಮಗ್ರಂಥಗಳಿಗೆ ವಿರುದ್ಧ ಹೇಳಿಕೆ ಎಂಬ ಕಾರಣಕ್ಕೆ ಶಿಕ್ಷೆ ಅನುಭವಿಸಿದ ಆಧುನಿಕ ವಿಜ್ಞಾನದ ಪಿತಾಮಹ ಗೆಲಿಲಿಯೊ ಗೆಲಿಲಿಯೊನ ಕಾಲಕ್ಕೆ ಈ ರಾಜಕೀಯ ನಾಯಕರು ಸಲ್ಲುತ್ತಾರೆ. ಮಾರಿಯೋ ಲಿವಿಯೊ ಎಂಬ ಇಸ್ರೇಲ್ ಮೂಲದ ಅಮೇರಿಕದ ಖಭೌತಶಾಸ್ತ್ರಜ್ಞ ‘ಗೆಲಿಲಿಯೊ ಅಂಡ್ ಸೈನ್ಸ್ ಡಿನಯರ್ಸ್’ ಎಂಬ ಹೊಸ ಪುಸ್ತಕದಲ್ಲಿ ಹೇಳುವಂತೆ: "ಸರ್ಕಾರದ ಮಟ್ಟದಲ್ಲಿ ವಿಜ್ಞಾನ ವಿರೋಧಿ ವರ್ತನೆಗಳು, ವಿಜ್ಞಾನ ಮತ್ತು ಧರ್ಮದ ನಡುವೆ ಅನಗತ್ಯ ಘರ್ಷಣೆಗಳು, ಮಾನವಿಕಗಳು ಹಾಗೂ ವಿಜ್ಞಾನ ವಿಷಯಗಳ ನಡುವೆ ಭಾರಿ ಕಂದಕ ಮೂಡಿರುವ ಜಗತ್ತಿನಲ್ಲಿ ಗೆಲಿಲಿಯೋ ಗೆಲಿಲಿಯ ಕಥೆ ಎಲ್ಲಕ್ಕೂ ಮೊದಲು ಚಿಂತನೆಯ ಸ್ವಾತಂತ್ರ್ಯದ ಮಹತ್ವವನ್ನು ನೆನಪಿಸುತ್ತದೆ ".

ಕೊರೊನಾ ವೈರಸ್ ಉಲ್ಬಣಗೊಳ್ಳುತ್ತಿರುವ ಹೊತ್ತಿನಲ್ಲೇ, ಮತ್ತೊಂದು ಜಾಗತಿಕ ಸಾಂಕ್ರಾಮಿಕ ಎನಿಸಿಕೊಂಡ ‘ವಿಜ್ಞಾನ ನಿರಾಕರಣೆ’ ಪರೀಕ್ಷೆಗೆ ಒಳಗಾಗುತ್ತಿಲ್ಲ. ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರನ್ನು ಅನೇಕ ಕಾರಣಗಳಿಗಾಗಿ ‘ ಟ್ರಾಪಿಕ್ಸ್ ದೇಶಗಳ ಟ್ರಂಪ್ ’ ಎಂದು ಕರೆಯಲಾಗುತ್ತದೆ. ಅಂತಹ ಕಾರಣಗಳಲ್ಲಿ ಒಂದು: ಕೊರೊನಾ ವೈರಸ್ ಅನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂಬುದನ್ನು ಅವರು ನಿರಾಕರಿಸಿರುವುದು. ಕೊರೊನಾವನ್ನು ಅವರು "ಮಾಮೂಲಿ ಜ್ವರ" ಮತ್ತು "ಶೀತ" ಎಂದು ಕರೆಯುತ್ತಾರೆ. ಅವರು ಒಂದೆಡೆ ಹೇಳಿರುವಂತೆ ‘ಕೊಳಚೆ ನೀರಿಗೆ’ ಧುಮುಕಿದಾಗಲೂ ಬ್ರೆಜಿಲಿಯನ್ನರಿಗೆ "ಎಂದಿಗೂ ಏನೂ ತಾಗುವುದಿಲ್ಲ". ವೈರಸ್ ಹರಡುವಿಕೆ ತಡೆಯಲು ಈಗಾಗಲೇ ಬ್ರೆಜಿಲಿಯನ್ನರೊಳಗೆ 'ಪ್ರತಿಕಾಯಗಳು' ಅಭಿವೃದ್ಧಿಗೊಂಡಿರಬಹುದು. ನಂತರ ಅವರು ಅರಣ್ಯನಾಶದ ಮಾಹಿತಿ ನೀಡಿದ ಬಾಹ್ಯಾಕಾಶ ಏಜೆನ್ಸಿಯ ಮುಖ್ಯಸ್ಥರನ್ನು ವಜಾ ಮಾಡಿ, ಅದೊಂದು ಸುಳ್ಳು ವಿವರ ಎಂದು ಕರೆದರು.

ಇಂಗ್ಲೆಂಡಿನಲ್ಲಿ, ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಾವು ಸ್ವತಃ ಅನಾರೋಗ್ಯಕ್ಕೆ ತುತ್ತಾಗುವ ಮೊದಲು ಕೊರೊನಾ ವೈರಸ್ ಕುರಿತು ನಡೆದ ಐದು ಪ್ರಮುಖ ಕೋಬ್ರಾ ಸಭೆಗಳನ್ನು (ತುರ್ತು ಸಂದರ್ಭಗಳಲ್ಲಿ ನಡೆಯುವ ಉನ್ನತ ಮಟ್ಟದ ಸಭೆಯನ್ನು ಇಂಗ್ಲೆಂಡಿನಲ್ಲಿ ಕೋಬ್ರಾ ಸಭೆ ಎನ್ನುತ್ತಾರೆ) ತಪ್ಪಿಸಿಕೊಂಡರು. ಆದರೆ ಸಾಂಕ್ರಾಮಿಕ ರೋಗದ ಬಗ್ಗೆ ಅವರ ವರ್ತನೆ ಭಿನ್ನವಾಗಿಯೇನೂ ಇರಲಿಲ್ಲ. ಹವಾಮಾನ ಬದಲಾವಣೆಗೂ ಕಾಯಿಲೆಗೂ ಸಂಬಂಧ ಇದೆಯೇ ಎಂಬ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದರು. ಗಮನಾರ್ಹ ಅಂಶ ಎಂದರೆ 2019 ರ ಬೋರಿಸ್ ಜಾನ್ಸನ್ ಚುನಾವಣಾ ಪ್ರಚಾರಕ್ಕೆ ಹವಾಮಾನ ವಿಜ್ಞಾನ ನಿರಾಕರಿಸುವ ಗುಂಪುಗಳು ಅತಿದೊಡ್ಡ ದಾನಿಗಳಾಗಿದ್ದವು. ಮುಖಗವಸುಗಳನ್ನು ಧರಿಸಿದ್ದಕ್ಕಾಗಿ ಜನರನ್ನು ಪೀಡಿಸುವ ಕಾಂಬೋಡಿಯಾದ ಪ್ರಬಲ ವ್ಯಕ್ತಿ ಹನ್ ಸೇನ್ ಅವರಿಂದ ಹಿಡಿದು "ಬಲವಾದ ನೈತಿಕ ಸ್ಥೈರ್ಯ"ದಿಂದಲೇ ಸೋಂಕನ್ನು ಹೊರಗೆ ದಬ್ಬಬಹುದು ಎನ್ನುವ ಮೆಕ್ಸಿಕೋ ಅಧ್ಯಕ್ಷ ಆಂಡ್ರೆಸ್ ಒಬ್ರಡಾರ್‌ ತನಕ ಅನೇಕ ಮಂದಿ ವಿಜ್ಞಾನವನ್ನು ನಿರಾಕರಿಸುವ ಗುಂಪಿನ ಸದಸ್ಯರಾಗಿದ್ದಾರೆ.

ನಾವು ಗೆಲಿಲಿಯೊ ಕಾಲಕ್ಕಿಂತಲೂ ಹಿಂದೆ ಇದ್ದೇವೆ ಎಂಬುದನ್ನು ಲಿವಿಯೊ ತನ್ನ ಹೊಸ ಪುಸ್ತಕದಲ್ಲಿ ನೆನಪಿಸುತ್ತಾರೆ. "ಇಂದು ನಾವು ಕಾಣುತ್ತಿರುವ ವಿಜ್ಞಾನದ ಬಗೆಗಿನ ಅಪನಂಬಿಕೆ ಮತ್ತು ದ್ವೇಷ ನಿಖರವಾಗಿ ಗೆಲಿಲಿಯೊ ವಿರುದ್ಧ ಹೋರಾಡುತ್ತಿದ್ದ ಮನೋಭಾವವೇ ಆಗಿದೆ. ಒಂದು ನಿರ್ದಿಷ್ಟ ಉದ್ದೇಶದೊಂದಿಗೆ ವಿಜ್ಞಾನವನ್ನು ಸಂಯೋಜಿಸುವ ಬದಲು ಧರ್ಮಗ್ರಂಥದ ವ್ಯಾಖ್ಯಾನದಿಂದ ಬೇರ್ಪಡಿಸುವ ಮೂಲಕ ಮತ್ತು ಪ್ರಕೃತಿಯ ನಿಯಮಗಳನ್ನು ಪ್ರಾಯೋಗಿಕ ಫಲಿತಾಂಶಗಳಿಂದ ತಿಳಿಯುವ ಯತ್ನದ ಮೂಲಕ, ನಮ್ಮ ಹಣೆಬರಹ ಮತ್ತು ಗ್ರಹಚಾರಗಳಿಗೆ ನಾವೇ ಹೊಣೆಗಾರರಾಗಬೇಕು ಎಂದು ವಿಜ್ಞಾನ ಒತ್ತಾಯಿಸುತ್ತದೆ ಎಂಬ ಕಲ್ಪನೆಯನ್ನು ಸೂಚ್ಯವಾಗಿ ಪರಿಚಯಿಸಿದವರಲ್ಲಿ ಗೆಲಿಲಿಯೋ ಒಬ್ಬರು" ಎಂಬುದಾಗಿ ಅವರು ಹೇಳುತ್ತಾರೆ.

ವಿಜ್ಞಾನದ ಬರಹಗಾರ ಮಾರ್ಕ್ ಹೂಫ್ನಾಗಲ್ ಅವರು ಟಂಕಿಸಿದ ಪದಪುಂಜ ‘ವಿಜ್ಞಾನ ನಿರಾಕರಣೆಯ ಜಾಗತಿಕ ಮಹಾಮಾರಿ’. ಈ ಮಹಾಮಾರಿಯಿಂದ ಭಾರತ ಕೂಡ ಹೊರತಾಗಿಲ್ಲ. ಹವಾಮಾನ ಬದಲಾವಣೆಯಿಂದ ಹಿಡಿದು, ವಿಕಾಸವಾದ, ಹೆಚ್‌ಐವಿ / ಏಡ್ಸ್ ಸಂಚು, ಆಯ್ಕೆ (ಚೆರ್ರಿ ಪಿಕ್ಕಿಂಗ್), ನಕಲಿ ತಜ್ಞರು, ಅಸಾಧ್ಯವಾದ ನಿರೀಕ್ಷೆಗಳು (ಚಂಚಲಮಯ ಗುರಿಗಳು ಎಂದೂ ಕರೆಯುತ್ತಾರೆ) ಮತ್ತು ತರ್ಕದ ಸಾಮಾನ್ಯ ತಪ್ಪುಗಳಂತಹ ವೈವಿಧ್ಯಮಯ ಸಂಗತಿಗಳವರೆಗೆ ನಿರಾಕರಣವಾದಿಗಳು ಐದು ತಂತ್ರಗಳನ್ನು ಹೆಣೆಯುತ್ತಾರೆ ಎನ್ನುತ್ತಾರೆ ಹೂಫ್ನಾಗಲ್. ಡಾರ್ವಿನ್ ಸಿದ್ಧಾಂತವನ್ನು ತಿರಸ್ಕರಿಸಿದ ಮಾಜಿ ಹಿರಿಯ ಸಚಿವ, ಯೋಗದಿಂದ ಹೆಚ್‌ಐವಿ ಗುಣಪಡಿಸಬಹುದು ಎಂದ ದೊಡ್ಡ ಟೆಲಿವಿಷನ್ ಆಧ್ಯಾತ್ಮಿಕ ಗುರು ಕೂಡ ಈ ನಿರಾಕರಣಾವಾದಿಗಳ ಪಟ್ಟಿಯಲ್ಲಿ ಬರುತ್ತಾರೆ. ಗೋಮೂತ್ರ ಕುಡಿಯುವುದರಿಂದ ಸೋಂಕು ತಡೆಗಟ್ಟಬಹುದು ಎಂದ ಅಸ್ಸಾಂನ ಬಿಜೆಪಿ ಶಾಸಕಿ ಕೂಡ ಇದೇ ಗುಂಪಿಗೆ ಸೇರುತ್ತಾರೆ.

ಇಂದಿನ ಲಾಕ್ ಡೌನ್ ಜಗತ್ತಿನಲ್ಲಿ ಕೊರೊನಾ ವೈರಸ್ಸಿಗೆ ಧನ್ಯವಾದಗಳು. ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಪ್ರಾಧ್ಯಾಪಕ ಅರ್ನಾಬ್ ಭಟ್ಟಾಚಾರ್ಯ ಅವರು ‘ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಹಾನಿಕಾರಕವಲ್ಲದ ಆದರೆ ಸುಳ್ಳಾಗಿರುವ ಸುದ್ದಿಯಿಂದ ಹಿಡಿದು ಮಾರಣಾಂತಿಕ ಹೊಡೆತ ನೀಡಬಲ್ಲ ಸಂಪೂರ್ಣ ತಪ್ಪು ವಿವರಗಳಿಂದ ಕೂಡಿದ ‘ಮಾಹಿತಿಮಾರಿ’ (ಇನ್ಫೋಡೆಮಿಕ್) ಎಂಬುದು ಟಿವಿ ಚಾನೆಲ್‌ಗಳು, ವಾಟ್ಸಾಪ್ ಮತ್ತು ಟ್ವಿಟರ್ ಮೂಲಕ ವೈರಸ್‌ಗಿಂತ ವೇಗವಾಗಿ ಹಬ್ಬುತ್ತಿದೆ ಎನ್ನುತ್ತಾರೆ. ಮುಂದುವರಿದು ಅವುಗಳಿಗೆ ಕಿರೀಟ ಇಟ್ಟಂತೆ ಡೊನಾಲ್ಡ್ ಟ್ರಂಪ್ ಅವರಂತಹ ನಾಯಕರು ನೀಡುವ ಹೇಳಿಕೆಗಳು ನಮ್ಮಲ್ಲಿ ವಿಲಕ್ಷಣವಾದವುಗಳಾಗಿವೆ. ಸೋಂಕುನಿವಾರಕಗಳನ್ನು ಲಸಿಕೆಯಾಗಿ ಪರಿವರ್ತಿಸುವ ಬಗ್ಗೆ ಅವರು ಲಜ್ಜೆಗೆಟ್ಟ ಹೇಳಿಕೆಗಳನ್ನು ನೀಡಬಹುದು ಮತ್ತು ವಾಸ್ತವತೆಯಿಂದ ನುಣುಚಿಕೊಳ್ಳಬಹುದು ಎಂಬುದು ಯೋಚನೆಗೆ ಈಡುಮಾಡುವಂತಹ ವಿಜ್ಞಾನ ನಿರಾಕರಣೆ ಸಂಸ್ಕೃತಿಯ ಫಲಿತಾಂಶವಾಗಿದೆ. ಅಮೆರಿಕ ಆಗಿರಲಿ ಅಥವಾ ಭಾರತದಲ್ಲೇ ಇರಲಿ, ಆಧುನಿಕ ಸಮಾಜದ ಮೂಲಕ ಹೊರಹೊಮ್ಮಿದ ನಿರಾಕರಣಾವಾದ ತನ್ನ ಅಂತರಂಗದಲ್ಲಿ ವೈಜ್ಞಾನಿಕ ಮನೋಭಾವ ಹೊಂದಿದೆ ಎಂದು ಹೆಮ್ಮೆಪಡುತ್ತದೆ. ಆದರೆ ಹವಾಮಾನ ಬದಲಾವಣೆಯಿಂದ ಹಿಡಿದು ಕುಲಾಂತರಿ ಬೆಳೆಗಳವರೆಗೆ, ಮತ್ತು ಹೋಮಿಯೋಪತಿಯಿಂದ ಹಿಡಿದು ಪವಾಡ ಚಿಕಿತ್ಸೆಯ ತನಕ, ವಿಜ್ಞಾನ ನಿರಾಕರಣೆ ಎಂಬುದು ಪ್ರಪಂಚದ ಎಲ್ಲೆಡೆ ನಿಧಾನವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗವಾಗಿದೆ ಎಂದು ಹೇಳುತ್ತಾರೆ.

ಪರಸ್ಪರ ಸಂಬಂಧ ಮತ್ತು ಕಾರಣವನ್ನು ಬೆರೆಸುವುದು ಸುಲಭ, ಅನುಕೂಲ ಸಿಂಧು ಮಾಹಿತಿಯನ್ನು (ಚೆರ್ರಿ ಪಿಕಿಂಗ್ ಡೇಟಾ) ಪಡೆಯುವುದು ಸುಲಭ, ಅಂಕಿ - ಅಂಶಗಳನ್ನು ಹೆಕ್ಕಿ ನೋಡುವುದು ಸುಲಭ. ವಿಶೇಷವಾಗಿ ಅಧಿಕಾರದಲ್ಲಿ ಇರುವವರಿಗೆ ಮತ್ತು ಹಿರಿಯರನ್ನು ಗೌರವಿಸುವ ಸಂಸ್ಕೃತಿಗೆ ಇದಿರಾಗಿ ಹೇಳಿಕೆಗಳನ್ನು ನೀಡುವುದು ಅಥವಾ ಸವಾಲು ಎಸೆಯುವುದು ಕಷ್ಟ ಅಥವಾ ಅಪಾಯಕಾರಿ. ಶಾಲೆಯಲ್ಲಿಯೂ ಸಹ 'ಏಕೆ?' ಎಂದು ಕೇಳಲು ನಮಗೆ ಯಾರ ಪ್ರೋತ್ಸಾಹವೂ ಇರದು. ವಿಜ್ಞಾನವನ್ನು ಶಾಲಾ ಪರೀಕ್ಷೆಗಳ ನಂತರ ಮರೆತುಹೋಗುವ ದುರದೃಷ್ಟಕರ ವಿಷಯ ಮತ್ತು ನಾವು ವಾಸಿಸುವ ಪ್ರಪಂಚವನ್ನು ಅರ್ಥೈಸುವ ಮಾರ್ಗ ಅದು ಅಲ್ಲ ಎಂದು ಪರಿಗಣಿಸಿರುವುದು ಇದಕ್ಕೆ ಕಾರಣ. ಬರ್ಟೋಲ್ಟ್ ಬ್ರೆಕ್ಟ್ ತಮ್ಮ ಅಪ್ರತಿಮ ನಾಟಕವಾದ ‘ಲೈಫ್ ಆಫ್ ಗೆಲಿಲಿಯೊ’ದಲ್ಲಿ ಹೀಗೆ ಹೇಳಿದ್ದಾರೆ: ಯೋಚಿಸುವುದು ಮಾನವ ಜನಾಂಗದ ಒಂದು ದೊಡ್ಡ ಹರ್ಷ.

ದುಃಖದ ಸಂಗತಿ ಎಂದರೆ ದೇಶೀಯವಾಗಿ ಉಪಗ್ರಹಗಳನ್ನು ತಯಾರಿಸುತ್ತಿರುವ ಮತ್ತು ವಿಶ್ವದ ಜೀವ ಉಳಿಸುವ ಕೆಲವು ದುಬಾರಿಯಲ್ಲದ ಔಷಧಿಗಳ ಆವಿಷ್ಕಾರದಂತಹ ನಿಜವಾದ ಸಮಕಾಲೀನ ಸಾಧನೆಗಳನ್ನು ಕೊಂಡಾಡುವ ಬದಲು ಪ್ಲಾಸ್ಟಿಕ್ ಸರ್ಜರಿ ಮತ್ತು ಸೊನ್ನೆ ಕಂಡು ಹಿಡಿದ ಗತಕಾಲದ ವೈಜ್ಞಾನಿಕ ಸಾಧನೆಗಳನ್ನು ಮೆಲುಕು ಹಾಕುವತ್ತ ಭಾರತೀಯರು ಹಿಂದಡಿ ಇಡುತ್ತಿದ್ದು ಆ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ. ವಿಶ್ವದ ಅತ್ಯಂತ ಶಕ್ತಿಶಾಲಿ ನಾಯಕನೊಬ್ಬನಿಗೆ ವಿಜ್ಞಾನದ ಮೇಲೆ ಹುಟ್ಟಿದ ಅಪನಂಬಿಕೆಯಿಂದಾಗಿ 2018 ರಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟಲೆಂದು ಮೀಸಲಿಟ್ಟ ಬಜೆಟ್ಟಿನಲ್ಲಿ 15 ಶತಕೋಟಿ ಡಾಲರ್​ಗಳಷ್ಟು ಕಡಿತಗೊಂಡಿತು ಮತ್ತು ಇದರಿಂದಾಗಿ ಜಾಗತಿಕ ರೋಗ ತಡೆಗಟ್ಟುವಿಕೆ ಶೇ.80 ರಷ್ಟು ಕುಸಿಯಿತು. ಹೀಗಾಗಿ ಉಳಿದ ನಾಯಕರು ಈ ‘ಮತ್ತೊಂದು ಜಾಗತಿಕ ಸೋಂಕಿಗೆ’ ತುತ್ತಾಗದೆ ಇರುವುದು ಬಹಳ ಮುಖ್ಯ.

For All Latest Updates

ABOUT THE AUTHOR

...view details