ಕರ್ನಾಟಕ

karnataka

ETV Bharat / bharat

ಕೇಂದ್ರ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡಲ್ಲ: ಈಟಿವಿ ಭಾರತ ವಿಶೇಷ ಸಂದರ್ಶನದಲ್ಲಿ ಪಿ.ಚಿದಂಬರಂ - ಪಿ.ಚಿದಂಬರಂ ಸಂದರ್ಶನ

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಭಾರತದ ಆರ್ಥಿಕತೆ ಎದುರಿಸುತ್ತಿರುವ ಹಲವು ಸವಾಲುಗಳ ಕುರಿತು ಈಟಿವಿ ಭಾರತದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Interview of Ex-Finance Minister P Chidambaram,ಈಟಿವಿ ಭಾರತ ಜೊತೆ ಪಿ.ಚಿದಂಬರಂ ಮಾತು
ಪಿ.ಚಿದಂಬರಂ

By

Published : Jan 1, 2020, 2:11 PM IST

ಚೆನ್ನೈ:ಭಾರತದ ಆರ್ಥಿಕತೆ ಎದುರಿಸುತ್ತಿರುವ ಹಲವಾರು ವಿಷಯಗಳ ಕುರಿತು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡುವಲ್ಲಿ ಮುಂಚೂಣಿಯಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕ ಚಿದಂಬರಂ, ಭಾರತೀಯ ಆರ್ಥಿಕತೆಯ ಕುಸಿತ, ಕಾರ್ಪೊರೇಟ್ ತೆರಿಗೆ ದರ ಕಡಿತ ಮತ್ತು ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ವಿತರಣೆ ಸೇರಿದಂತೆ ಅನೇಕ ವಿಚಾರಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈಟಿವಿ ಭಾರತ ಜೊತೆ ಪಿ. ಚಿದಂಬರಂ ಮಾತು

ಪ್ರಶ್ನೆ:ದೇಶದ ಆರ್ಥಿಕತೆ ಐಸಿಯುನಲ್ಲಿದೆ ಎಂದು ನೀವು ಹೇಳಿದ್ದೀರಿ, ಆದರೆ ಸರ್ಕಾರ ಇದನ್ನು ನಿರಾಕರಿಸುತ್ತಿದೆ. ಸರ್ಕಾರ ತನ್ನ ಇತ್ತೀಚಿನ ಸುಧಾರಣೆಗಳ ಫಲಿತಾಂಶಗಳನ್ನು ನೀಡುತ್ತಿವೆ ಎಂದು ಹೇಳುತ್ತಿದೆ. ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಉತ್ತರ:ನಾನು ಐಸಿಯು ಪದವನ್ನು ಬಳಸಲಿಲ್ಲ. ವಾಸ್ತವವಾಗಿ, ಇದನ್ನು ಕೆಲವು ತಿಂಗಳ ಹಿಂದಿನವರೆಗೂ ಈ ಸರ್ಕಾರಕ್ಕೆ ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಆಗಿದ್ದ ಡಾ.ಅರವಿಂದ್ ಸುಬ್ರಮಣಿಯನ್ ಅವರ ಸಂದರ್ಶನದಲ್ಲಿ ಬಳಸಲಾಗಿದೆ. ಡಾ.ಅರವಿಂದ್ ಸುಬ್ರಮಣಿಯನ್ ಅವರಿಂದ ಸರ್ಕಾರ ಉತ್ತರ ಪಡೆಯಲು ಬಯಸುತ್ತದೆಯೇ? ನಾನು ಈಗಾಗಲೇ ಹಣಕಾಸು ಸಚಿವರಿಗೆ ಪ್ರತಿಕ್ರಿಯೆ ನೀಡುವಂತೆ ಮನವಿ ಮಾಡಿದ್ದೇನೆ. ಆದರೆ, ಅವರು ಪ್ರತಿಕ್ರಿಯಿಸಿಲ್ಲ.

ಈ ಸರ್ಕಾರವು ಸತ್ಯ ಮತ್ತು ಅಂಕಿ ಅಂಶಗಳನ್ನ ಮುಂದಿಟ್ಟುಕೊಂಡು ವ್ಯವಹರಿಸಲು ಸಿದ್ಧವಿಲ್ಲ. ಆದ್ದರಿಂದ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರ ಹೇಳುತ್ತದೆ. ಸರ್ಕಾರ ಮಾತ್ರ ಅದನ್ನು ನಂಬುತ್ತದೆ. ಆರ್ಥಿಕತೆ ಉತ್ತಮವಾಗಿದೆ ಎಂದು ಯಾರೂ ನಂಬುವುದಿಲ್ಲ.

ಪ್ರಶ್ನೆ: ಕಾರ್ಪೊರೇಟ್ ತೆರಿಗೆ ದರ ಕಡಿತದಂತಹ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಇತ್ತೀಚಿನ ಸುಧಾರಣೆಗಳನ್ನು ನೀವು ಹೇಗೆ ನೋಡುತ್ತೀರಿ?

ಉತ್ತರ: ಕಾರ್ಪೊರೇಟ್ ತೆರಿಗೆ ದರ ಕಡಿತವು ಸುಧಾರಣೆಯೆಂದು ನಾನು ಭಾವಿಸುವುದಿಲ್ಲ. ವಾಸ್ತವವಾಗಿ, ಇದು ತಪ್ಪು ಕೆಲಸ. ಬೇಡಿಕೆಯ ನಿರ್ಬಂಧವಿದ್ದಾಗ, ಜನರ ಕೈಯಲ್ಲಿ ಕೊಳ್ಳುವ ಶಕ್ತಿ ಇಲ್ಲದಿದ್ದಾಗ, ನೀವು ತೆರಿಗೆಗಳನ್ನು ಕಡಿತಗೊಳಿಸಲು ಬಯಸಿದರೆ ನೀವು ಪರೋಕ್ಷ ತೆರಿಗೆಗಳನ್ನು ಕಡಿತಗೊಳಿಸಬೇಕು. ಕಾರ್ಪೊರೇಟ್ ತೆರಿಗೆ ನೇರ ತೆರಿಗೆ, ಇದು ಪ್ರಗತಿಪರ ತೆರಿಗೆ ಹೀಗಾಗಿ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸುವುದು ತಪ್ಪು.

ಪ್ರಶ್ನೆ: ಸರ್ಕಾರದ ಡೇಟಾವನ್ನು ನಂಬಲು ಸಾಧ್ಯವಿಲ್ಲ ಮತ್ತು ಡೇಟಾವನ್ನು ನಿಖರವಾಗಿ ಮಾಡಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ನೀವು ಹೇಳಿದ್ದೀರಿ. ಈ ವಿಷಯವನ್ನು ಅಧ್ಯಯನ ಮಾಡಲು ಸರ್ಕಾರ ಇತ್ತೀಚೆಗೆ ಒಂದು ತಂಡ ರಚನೆ ಮಾಡಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಉತ್ತರ: ಸರ್ಕಾರದ ಮಾಹಿತಿಯ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ ಎಂಬುದು ತಡವಾದ ಒಪ್ಪಿತವಾದ ವಿಚಾರ. ಅವರು ನಿರುದ್ಯೋಗದ ಬಗ್ಗೆ ಎನ್‌ಎಸ್‌ಎಸ್‌ಒ ನೀಡಿದ ಮಾಹಿತಿ ಹತ್ತಿಕ್ಕಿದರು. ಗ್ರಾಮೀಣ ಭಾರತದಲ್ಲಿ ಬಳಕೆಯ ಕುಸಿತದ ಬಗ್ಗೆ ನಡೆಸಿದ ಸಮೀಕ್ಷೆಯನ್ನು ಅವರು ಹತ್ತಿಕ್ಕಿದರು. ಡಾ. ಪ್ರೋನಾಬ್ ಸೇನ್ ಅವರ ಅಡಿಯಲ್ಲಿ ಸಮಿತಿಯ ನೇಮಕವಾಗಿರುವುದನ್ನ ನಾನು ಸ್ವಾಗತಿಸುತ್ತೇನೆ. ಆದರೆ, ಅವರು ಶೀಘ್ರವಾಗಿ ಕಾರ್ಯನಿರ್ವಹಿಸಬೇಕು ಮತ್ತು ಮಾಹಿತಿಯ ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸಬೇಕು. 6 ವರ್ಷಗಳ ಹಿಂದಿನವರೆಗೂ ಭಾರತದ ಡೇಟಾ ವಿಶ್ವಾಸಾರ್ಹವಾಗಿತ್ತು. ಕಳೆದ 6 ವರ್ಷಗಳಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ.

ಪ್ರಶ್ನೆ: ನಿಷ್ಕ್ರಿಯ ಆಸ್ತಿಗಳು (ಎನ್‌ಪಿಎ) ಕಡಿಮೆಯಾಗುತ್ತಿವೆ ಎಂದು ಸರ್ಕಾರ ಹೇಳುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಣಕಾಸು ಕ್ಷೇತ್ರದಲ್ಲಿ ಸಂಪೂರ್ಣ ಸುಧಾರಣೆ ಆಗಬೇಕು ಎಂದು ನೀವು ಸೂಚಿಸಿದ್ದೀರಿ. ಆ ಸಲಹೆಗಳು ಯಾವುವು?

ಈ ಬಗ್ಗೆ ಸರ್ಕಾರ ಕೇವಲ ಮೇಲಿಂದ ಮೇಲಷ್ಟೇ ಸುಧಾರಣೆ ತರುತ್ತಿದೆ. ಅವರ ಪ್ರಕಾರ, ಶೇ 10 ಅಥವಾ ಶೇ 9.6 ರಷ್ಟು ನಿಷ್ಟ್ಕೀಯ ಆಸ್ತಿಗಳು ಕಡಿಮೆಯಾಗಿವೆ. ಸಾಲದ ಮರು ಪಾವತಿ ಪ್ರಮಾಣವನ್ನು ಇಲ್ಲಿ ಮರೆ ಮಾಚಲಾಗಿದೆ. ಹಾಗಾಗಿ ಎನ್‌ಪಿಎ ಕಡಿಮೆಯಾಗಿದೆ ಎಂದೇ ಹೇಳಲಾಗುತ್ತಿದೆ. ಆದ್ರೆ ಆರ್‌ಬಿಐ ಬಿಡುಗಡೆ ಮಾಡಿರುವ ವರದಿ ಪ್ರಕಾರ, ದೇಶದಲ್ಲಿ ನಿಷ್ಕೃೀಯ ಆಸ್ತಿಗಳ ಪ್ರಮಾಣ ಹೆಚ್ಚುತ್ತಿದೆ. ಇದ್ರ ಪ್ರಮಾಣ ಮುಂದಿನ 6 ತಿಂಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಪ್ರಶ್ನೆ: ದೇಶದಲ್ಲಿನ ಉದ್ಯೋಗ ಪರಿಸ್ಥಿತಿ ಮತ್ತು ಸಾಮಾನ್ಯ ಜನರ ಮೇಲಾಗುತ್ತಿರುವ ನಿಧಾನಗತಿಯ ಪ್ರಭಾವದ ಬಗ್ಗೆ ನಿಮ್ಮ ಅಭಿಪ್ರಾಯ?

ಉತ್ತರ: ಉದ್ಯೋಗ ದರ ಕುಸಿಯುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಉದ್ಯೋಗವು 3 ರಿಂದ 4 ಕೋಟಿಗಳವರೆಗೆ ಕುಸಿದಿದೆ ಎಂದು ಸಿಎಂಐಇ ಮಾಹಿತಿ ತೋರಿಸುತ್ತದೆ. ಸಿಎಂಐಇ ಮಾಹಿತಿಯನ್ನ ವಿರೋಧಿಸಲು ಬೇರೆ ಯಾವುದೇ ಮಾಹಿತಿ ನಮ್ಮಲ್ಲಿಲ್ಲ. ಖಾಸಗಿ ವಲಯದದಲ್ಲಿ ದೊಡ್ಡ ನೇಮಕಾತಿಯನ್ನು ನಾವು ಕಾಣುತ್ತಿಲ್ಲ. ಹೀಗಾಗಿ ನನ್ನ ತೀರ್ಮಾನವೆಂದರೆ ನೋಟು ಅಮಾನ್ಯೀಕರಣದ ನಂತರ ಉದ್ಯೋಗ ಕುಸಿಯುತ್ತಿದೆ ಮತ್ತು ಕುಸಿಯುತ್ತಲೇ ಇದೆ. ಪ್ರಸ್ತುತ ಮಂದಗತಿಯಲ್ಲಿ ಉದ್ಯೋಗ ಕುಸಿಯುತ್ತದೆ ಎಂಬುದು ತಾರ್ಕಿಕ ತೀರ್ಮಾನವಾಗಿದೆ. ಆದರೆ ಸರ್ಕಾರ ಮಾತ್ರ ಇದನ್ನ ನಿರಾಕರಿಸುತ್ತಿದೆ. ನಮಗೆ ತಿಳಿದಿದೆ ಉದ್ಯೋಗವು ಕುಸಿಯುತ್ತಿದೆ ಮತ್ತು ಕುಸಿದಿದೆ.

ಪ್ರಶ್ನೆ: ಆರ್ಥಿಕ ಕುಸಿತ ಎದುರಿಸಲು ವೈಯಕ್ತಿಕ ಆದಾಯ ತೆರಿಗೆ ದರ ಕಡಿತಗೊಳಿಸುವುದು ಸರಿಯಾದ ಪರಿಹಾರವೇ?

ಉತ್ತರ: ಆದಾಯ ತೆರಿಗೆ ದರವನ್ನು ಕಡಿತಗೊಳಿಸಲು ಇದು ಸರಿಯಾದ ಸಮಯವಲ್ಲ. ನೀವು ಯಾವುದೇ ತೆರಿಗೆಗಳನ್ನು ಕಡಿತಗೊಳಿಸಲು ಬಯಸಿದರೆ ಕಸ್ಟಮ್ಸ್ ಸುಂಕ ಮತ್ತು ಸರಕು ಮತ್ತು ಸೇವಾ ತೆರಿಗೆಯಂತ (ಜಿಎಸ್​ಟಿ) ಪರೋಕ್ಷ ತೆರಿಗೆಗಳನ್ನು ಕಡಿತಗೊಳಿಸಬೇಕು.

ABOUT THE AUTHOR

...view details