ನವದೆಹಲಿ: ಉತ್ತರಪ್ರದೇಶದಲ್ಲಿ ಶಿಕ್ಷಕಿಯೋರ್ವಳು ಅನಾಮಿಕ ಶುಕ್ಲಾ ಎಂಬ ಹೆಸರಿನೊಂದಿಗೆ 25 ಶಾಲೆಗಳಲ್ಲಿ ಏಕಕಾಲಕ್ಕೆ ಕೆಲಸ ನಿರ್ವಹಿಸಿ ಕೋಟಿಗಟ್ಟಲೇ ಸಂಭಾವನೆ ಗಳಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ಹಗರಣದಿಂದಾಗಿ ನಿಜವಾದ ಅನಾಮಿಕ ಶುಕ್ಲಾ ಎಂಬ ಹೆಸರಿನ ಮಹಿಳೆಗೆ ಅನ್ಯಾಯವಾದಂತಾಗಿದೆ. ಉತ್ತರ ಪ್ರದೇಶ ಸರ್ಕಾರ ಈ ಮಹಿಳೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಡತನದಲ್ಲಿ ಬದುಕುತ್ತಿದ್ದ ಅನಾಮಿಕ ಶುಕ್ಲಾ ಎಂಬ ಮಹಿಳೆಗೆ ತನ್ನ ಹೆಸರಿನಲ್ಲಿ ಇಷ್ಟೆಲ್ಲಾ ಹಗರಣಗಳು ನಡೆದಿವೆ ಎಂಬುದೇ ತಿಳಿದಿಲ್ಲ. ಅವಳ ಹೆಸರಿನ ದುರುಪಯೋಗವಾಗಿರುವುದು ಸಹ ಆಕೆಗೆ ತಿಳಿಯದ ವಿಷಯವಾಗಿದೆ. ಇದು ಆಕೆಯ ಸಮಸ್ಯೆಯಲ್ಲ, ರಾಜ್ಯ ಸರ್ಕಾರದ ಲೂಟಿ ವ್ಯವಸ್ಥೆಯಿಂದಾಗಿರುವ ತಪ್ಪು. ಆದ್ದರಿಂದ ನೈಜ ಅನಾಮಿಕ ಶುಕ್ಲಾಗೆ ನ್ಯಾಯ ಒದಗಿಸಬೇಕು ಎಂದು ಪ್ರಿಯಾಂಕ ಒತ್ತಾಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಪ್ರಿಯಾಂಕ, ನೈಜ ಅನಾಮಿಕ ಶುಕ್ಲಾಗೆ ಸರ್ಕಾರ ನ್ಯಾಯ ದೊರಕಿಸಿಕೊಡುವುದರ ಜೊತೆಗೆ ಉದ್ಯೋಗ ಭದ್ರತೆಯನ್ನು ನೀಡಬೇಕೆಂದು ಹಿಂದಿಯಲ್ಲಿ ಬರೆದಿದ್ದಾರೆ.
ಏನಿದು ಪ್ರಕರಣ:
ಓರ್ವ ಮಹಿಳೆ ಅನಾಮಿಕ ಶುಕ್ಲಾ, ಅನಾಮಿಕಾ ಸಿಂಗ್, ಪ್ರಿಯಾ ಹೀಗೆ ನಾನಾ ಹೆಸರುಗಳನ್ನಿಟ್ಟುಕೊಂಡು ಉತ್ತರಪ್ರದೇಶದ ಅಂಬೇಡ್ಕರ್ ನಗರ, ಬಾಗ್ಪತ್, ಅಲಿಘಡ್, ಸಹರಾನ್ಪುರ್ ಮತ್ತು ಪ್ರಯಾಗರಾಜ್ ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ದಾಖಲೆ ಸೃಷ್ಟಿಸಿ ಒಂದು ಕೋಟಿಗಿಂತಲೂ ಅಧಿಕ ಹಣ ಸಂಪಾದನೆ ಮಾಡಿರುವುದು ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು.
ಮಾನವ್ ಸಂಪದ ಪೋರ್ಟಲ್‌ನಲ್ಲಿ ಶಿಕ್ಷಕರ ಡೇಟಾ ಬೇಸ್ ರಚಿಸುವಾಗ ಅನಾಮಿಕ ಶುಕ್ಲಾಳ ಹೆಸರಿನಲ್ಲಿ ಮಾಡಲಾದ ವಂಚನೆ ಬೆಳಕಿಗೆ ಬಂದಿದೆ. ಈ ಪೋರ್ಟಲ್‌ನಲ್ಲಿ ಶಿಕ್ಷಕರ ದಾಖಲೆಗಳನ್ನು ಅಪ್‌ಲೋಡ್ ಮಾಡುವ ವೇಳೆ ಅನಾಮಿಕಾ ಶುಕ್ಲಾ ಅವರ ವೈಯಕ್ತಿಕ ವಿವರಗಳು ದೊರಕಿವೆ. ಸದ್ಯ ಪೊಲೀಸರು ವಂಚಕಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.