ಕೋಲ್ಕತ್ತಾ:''ಪ್ರಧಾನಿ ನರೇಂದ್ರ ಮೋದಿಯೊಂದಿಗೆ ನಾನು ಮಾತನಾಡಲು ಸಿದ್ಧ, ಆದರೆ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು'' ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಷರತ್ತು ಹಾಕಿದ್ದಾರೆ.
''ಪ್ರಧಾನಿಯೊಂದಿಗೆ ಮಾತನಾಡಲು ಸಿದ್ಧ, ಆದ್ರೆ ಒಂದು ಷರತ್ತು'': ಸಿಎಎ ವಿರುದ್ಧದ ನಿರ್ಣಯಕ್ಕೆ ಅಂಟಿಕೊಂಡ ದೀದಿ!
ಕೇಂದ್ರ ಸರ್ಕಾರದ ವಿವಾದಾತ್ಮಕ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈಗಾಗಲೇ ಕೆಲವು ರಾಜ್ಯಗಳು ಸಿಎಎ ವಿರೋಧಿ ನಿರ್ಣಯವನ್ನು ಕೈಗೊಂಡಿವೆ. ಸೋಮವಾರ ಪಶ್ಚಿಮ ಬಂಗಾಳ ಸರ್ಕಾರ ಕೂಡ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಿರ್ಣಯ ಅಂಗೀಕರಿಸಿತ್ತು. ಇದೀಗ ಪ್ರಧಾನಿ ಜೊತೆ ಮಾತುಕತೆ ಸಜ್ಜಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಒಂದು ಷರತ್ತನ್ನು ಸಹ ಹಾಕಿದ್ದಾರೆ.
ಕೋಲ್ಕತ್ತಾದಲ್ಲಿ ನಡೆದ ಸಿಎಎ ವಿರೋಧಿ ಚಿತ್ರಕಲಾ ಪ್ರದರ್ಶನದಲ್ಲಿ ಮಾತನಾಡಿದ ಅವರು, ''ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಬೇಕಾದರೆ ಸರ್ವ ಪಕ್ಷ ಸಭೆಯನ್ನು ಕರೆದಿಲ್ಲ. ಏಕಮುಖ ನಿರ್ಧಾರ ಕೈಗೊಳ್ಳಲಾಗಿದೆ'' ಎಂದು ಆರೋಪಿಸಿದರು. ನಂತರ ಮಾತನಾಡಿದ ಅವರು ''ಎನ್ಆರ್ಸಿ ಹಾಗೂ ಎನ್ಪಿಆರ್ ಕಾಯ್ದೆಗಳು ಕೂಡಾ ದೇಶಕ್ಕೆ ಮಾರಕವಾಗಿದ್ದು, ಇವುಗಳನ್ನು ಹಿಂಪಡೆಯಬೇಕು'' ಎಂದು ಒತ್ತಾಯಿಸಿದ್ದಾರೆ. ಇದಾದ ನಂತರವೇ ಪ್ರಧಾನಿಯೊಂದಿಗೆ ಮಾತನಾಡಲು ಸಿದ್ಧ ಎಂದರು. ''ನಮಗೆ ಬೇಕಾಗಿರುವುದು ಸಮಗ್ರ ಭಾರತ ಹಾಗೂ ಸಮಗ್ರ ಪಶ್ಚಿಮ ಬಂಗಾಳ. ಈ ಕಾಯ್ದೆಗಳು ದೇಶ ಹಾಗೂ ರಾಜ್ಯದ ಸಮಗ್ರತೆಗೆ ಮಾರಕ. ಹೀಗಾಗಿ ವಿವಾದಾತ್ಮಕ ಕಾಯ್ದೆಗಳನ್ನು ವಿರೋಧಿಸುತ್ತಿದ್ದೇವೆ'' ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ವಿಧಾನಸಭೆ ಪೌರತ್ವ ತಿದ್ದುಪಡಿ ಕಾಯ್ದೆ ಮಸೂದೆಯನ್ನು ವಿರೋಧಿಸುವ ಮಸೂದೆಯನ್ನು ಅಂಗೀಕಾರ ಮಾಡಿತ್ತು. 2021ರ ಚುನಾವಣೆಯಲ್ಲಿ ಈ ನಿರ್ಣಯ ತುಂಬಾನೇ ಮಹತ್ವ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಕೇರಳ, ರಾಜಸ್ಥಾನ ಹಾಗೂ ಪಂಜಾಬ್ ರಾಜ್ಯಗಳು ಸಿಎಎ ವಿರೋಧಿ ನಿರ್ಣಯ ಕೈಗೊಂಡಿವೆ.