ಭೋಪಾಲ್ : ಬಿಜೆಪಿಯು ನಮ್ಮ ಪಕ್ಷದ 22 ಶಾಸಕರನ್ನು ಸೆರೆಯಲ್ಲಿಟ್ಟುಕೊಂಡಿತ್ತು. ಆದರೆ ನಮ್ಮ ಸರ್ಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆಗೆ ಸಿದ್ಧವಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್ ನಾಥ್ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಪಾಲ ಲಾಲ್ ಜಿ ಟಂಡನ್ ಅವರನ್ನು ಭೇಟಿಯಾಗಿ ಪತ್ರವೊಂದನ್ನು ಸಲ್ಲಿಸಿದ ಕಮಲ್ ನಾಥ್, ಬಿಜೆಪಿಯವರು ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೂರು ದಿನಗಳ ಹಿಂದಷ್ಟೇ 22 ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ರಾಜ್ಯದ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ ಮಧ್ಯದಲ್ಲೇ ಕಮಲ್ ನಾಥ್, ಟಂಡನ್ ಅವರನ್ನು ಭೇಟಿಯಾಗಿ ಮೂರು ಪುಟಗಳ ಪತ್ರವನ್ನು ಸಲ್ಲಿಸಿದ್ದಾರೆ. ಇದರಲ್ಲಿ ಬಿಜೆಪಿ ತಮ್ಮ ಶಾಸಕರನ್ನು ಸೆರೆಯಲ್ಲಿಟ್ಟಿತ್ತು ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ವಕ್ತಾರರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರದಲ್ಲಿ, ಮಾರ್ಚ್ 16 ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚನೆ ನಡೆಸಲು ಕಮಲ್ ನಾಥ್ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಮದ್ಯಪ್ರದೇಶ ರಾಜಕೀಯ ಬಿಕ್ಕಟ್ಟಿನ ಬಗ್ಗೆ ತಿಳಿಸಿರುವ ಕಮಲ್ ನಾಥ್, ಮಾರ್ಚ್ 3 ರ ರಾತ್ರಿ ಮತ್ತು ಮಾರ್ಚ್ 4ರಿಂದ ಮಾರ್ಚ್ 10 ರವರೆಗಿನ ರಾಜ್ಯದ ರಾಜಕೀಯ ಘಟನೆಗಳ ಅನುಕ್ರಮವನ್ನು ಉಲ್ಲೇಖಿಸಿದ್ದಾರೆ. ಈ ಅವಧಿಯಲ್ಲಿ ಕುದುರೆ ವ್ಯಾಪಾರ ನಡೆದಿವೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ಸೆರೆಯಲ್ಲಿದ್ದ ಕಾಂಗ್ರೆಸ್ ಶಾಸಕರ ಬಿಡುಗಡೆಗೆ ತಮ್ಮ ಕಚೇರಿಯನ್ನು ಬಳಸಿಕೊಳ್ಳುವಂತೆ ನಾಥ್ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಕೆಲ ಸಚಿವರು ಸೇರಿದಂತೆ ಬಂಡಾಯವೆದ್ದ ಕಾಂಗ್ರೆಸ್ ಶಾಸಕರಲ್ಲಿ 19 ಮಂದಿಯನ್ನು ಬೆಂಗಳೂರಿನ ರೆಸಾರ್ಟ್‌ನಲ್ಲಿ ಬಿಜೆಪಿ ಸೆರೆಯಲ್ಲಿಟ್ಟಿದೆ ಎಂದು ಆಡಳಿತರೂಢ ಕಾಂಗ್ರೆಸ್ ಪಕ್ಷ ಆರೋಪಿಸಿದೆ.