ಮುಂಬೈ: ಆರ್ಥಿಕ ವೃದ್ಧಿ ದರವು ಕ್ಷೀಣಿಸುತ್ತಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಅಲ್ಪಾವಧಿ ಬಡ್ಡಿ (ರೆಪೊ) ದರಗಳನ್ನು ಇಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ದ್ವೈಮಾಸಿಕ ಹಣಕಾಸು ನೀತಿಯನ್ನು ಆರ್ಬಿಐ ಜೂನ್ 6ರಂದು ಪ್ರಕಟಿಸಲಿದ್ದು, ಈ ವೇಳೆ ರೆಪೊ ದರದಲ್ಲಿ ಶೇ 0.25ರಷ್ಟು ಕಡಿತವಾಗುವ ಸಾಧ್ಯತೆ ಹೆಚ್ಚಾಗಿದೆ.
ಲೋಕಸಭಾ ಚುನಾವಣೆ ನಂತರದ ಹಾಗೂ ಎನ್ಡಿಎ ಎರಡನೇ ಅವಧಿಯಲ್ಲಿ ನಡೆಯುತ್ತಿರುವ ಮೊದಲ ನೀತಿ ನಿರ್ಧಾರದ ಸಭೆ ಇದಾಗಲಿದೆ. ವಿತ್ತೀಯ ನೀತಿ ಸಮಿತಿಯು (ಎಂಪಿಸಿ) ರೆಪೊ ದರವನ್ನು ಶೇ 5.75ಕ್ಕೆ ಇಳಿಸಲಿದೆ. ಇದರಿಂದ ಈ ವರ್ಷದಲ್ಲಿ ಇದುವರೆಗೆ ಬಡ್ಡಿ ದರ ಕಡಿತದ ಪ್ರಮಾಣವು ಶೇ 0.75ರಷ್ಟು ಆಗಲಿದೆ ಎಂದು ಡಿಬಿಎಸ್ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿದೆ.
2019ರಲ್ಲಿ ಆರ್ಬಿಐ ಇದುವರೆಗೆ ಫೆಬ್ರವರಿ ಹಾಗೂ ಏಪ್ರಿಲ್ ತಿಂಗಳಲ್ಲಿ ತಲಾ ಶೇ 0.25ರಷ್ಟು ಬಡ್ಡಿದರ ಇಳಿಸಿತ್ತು. ಆರ್ಬಿಐ ಶೇ 0.35ಯಿಂದ ಶೇ 0.50ರವರೆಗೆ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾದ ಆರ್ಥಿಕ ಸಂಶೋಧನಾ ಇಲಾಖೆ ಅಂದಾಜಿಸಿದೆ.