ಮುಂಬೈ:ಆರ್ಥಿಕತೆಯ ಉತ್ತೇಜನದ ಪ್ರಯತ್ನವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 4.4ರಿಂದ ಶೇ. 4ಕ್ಕೆ ಇಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ ಶೇ. 4ಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಇದರಿಂದ ರಿವರ್ಸ್ ರೆಪೋ ದರವು ಶೇಕಡಾ 3.35 ರಷ್ಟಿರಲಿದೆ ಎಂದು ಹೇಳಿದ್ದಾರೆ. ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಈ ನಿರ್ಧಾರದ ಪರವಾಗಿ 5:1ರಷ್ಟು ಮತ ಚಲಾಯಿಸಿದೆ ಎಂದು ಹೇಳಿದ್ದಾರೆ.
ರೆಪೋ ದರ ಎಂದರೆ ರಿಸರ್ವ್ ಬ್ಯಾಂಕ್ ದೇಶದ ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದೆ. ರಿವರ್ಸ್ ರೆಪೋ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್ಬಿಐನಲ್ಲಿ ಠೇವಣಿ ಇಡುವ ಹಣಕ್ಕೆ ಆರ್‌ಬಿಐ ಕೊಡುವ ಬಡ್ಡಿಯ ದರವಾಗಿದೆ.
ದೇಶದ ಆರ್ಥಿಕ ಸ್ಥಿತಿ ನಿರೀಕ್ಷೆ ಮೀರಿ ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಕ್ಷೇತ್ರ ಮಾತ್ರ ಆಶಾದಾಯಕವಾಗಿದೆ ಎಂದಿದ್ದಾರೆ. ಕಚ್ಛಾ ತೈಲದ ಬೆಲೆ ಕಡಿಮೆಯಾಗಿರುವುದು ಆದಾಯ ಹರಿವಿನ ಮೇಲೆ ಪರಿಣಾಮ ಬೀರಿದೆ. ಹಣದುಬ್ಬರ ಪ್ರಮಾಣವು ಹೆಚ್ಚಿದೆ ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಲಾಕ್ಡ್ನಿಂದಾಗಿ ಇಎಂಐ ಪಾವತಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿತ್ತು. ದೇಶದಾದ್ಯಂತ ಲಾಕ್ಡೌನ್ ವಿಸ್ತರಣೆಯಾದ ಪರಿಣಾಮ ಇಎಂಐ ಪಾವತಿಗೆ ಮತ್ತೆ ಮೂರು ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.