ನವದೆಹಲಿ :ರಾಷ್ಟ್ರಪತಿ ಭವನದಲ್ಲಿ ಅನಾವರಣಗೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರದ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ರಾಷ್ಟ್ರಪತಿ ಭವನ ಸ್ಪಷ್ಟನೆ ನೀಡಿದೆ.
ನೇತಾಜಿಯವರ ಮೂಲ ಫೋಟೋ ಆಧರಿಸಿ ಭಾವಚಿತ್ರ ತಯಾರಿಸಲಾಗಿದೆ. ಸದ್ಯ ಹುಟ್ಟಿಕೊಂಡಿರುವ ವಿವಾದ ಸತ್ಯಕ್ಕೆ ದೂರವಾಗಿದೆ ಎಂದು ರಾಷ್ಟ್ರಪತಿ ಭವನ ಹೇಳಿದೆ. 'ಟ್ವೀಟ್ಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ. ರಾಷ್ಟ್ರಪತಿ ಭವನದಲ್ಲಿ ಈ ಚಿತ್ರ ತಯಾರಿಸಲಾಗಿದೆ. ಇದು ನಟನೊಬ್ಬನ ಚಿತ್ರ ಎಂದು ಭಾವಿಸುವ ನಿಮ್ಮದು ಯಾವ ರೀತಿಯ ಪ್ರಶ್ನೆ? ಟ್ವಿಟರ್ನಲ್ಲಿ ನಡೆಯುತ್ತಿರುವ ಚರ್ಚೆಯು ರಾಜಕೀಯ ಪ್ರೇರಿತವಾಗಿರಬಹುದು ಎಂದು ರಾಷ್ಟ್ರಪತಿ ಭವನದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಕಾನೂನಿನ ಮೇಲೆ ನಂಬಿಕೆಯಿದೆ, ಸತ್ಯಕ್ಕೆ ಜಯ ಸಿಗಲಿದೆ: ರಾಗಿಣಿ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಸ್ಮರಣೀಯವಾಗಿಸಲು ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಜಯಂತಿಯ ಸವಿನೆನಪಿಗಾಗಿ ರಾಷ್ಟ್ರಪತಿ ಭವನದಲ್ಲಿ ನೇತಾಜಿ ಭಾವಚಿತ್ರ ಅನಾವರಣ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾವಚಿತ್ರ ಅನಾವರಣ ಮಾಡಿದ್ದರು. ಆದರೆ ಈ ಭಾವಚಿತ್ರ ನೇತಾಜಿಯದ್ದಲ್ಲ ಅನ್ನೋ ವಿವಾದ ಹುಟ್ಟಿಕೊಂಡಿತ್ತು.
ಅನಾವರಣ ಮಾಡಿರುವ ಭಾವಚಿತ್ರವು ಸುಭಾಷ್ ಚಂದ್ರ ಬೋಸ್ ಅವರದ್ದಲ್ಲ. ಅದು ಬೋಸ್ ಅವರ ಜೀವನಚರಿತ್ರೆ ಆಧರಿತ 'ಗುಮ್ನಾಮಿ' ಸಿನಿಮಾದಲ್ಲಿ ಕಾಣಿಸಿಕೊಂಡ ಪ್ರಸಂಜಿತ್ ಚಟರ್ಜಿ ಅವರ ಭಾವಚಿತ್ರ ಎಂದು ಟ್ವಿಟ್ಟರ್ನಲ್ಲಿ ಹಲವರು ಆರೋಪಿಸಿದ್ದರು.