ಜೈಪುರ (ರಾಜಸ್ಥಾನ):ಇತ್ತೀಚೆಗೆ ಪಡೆದುಕೊಳ್ಳಲಾದ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಗಳು (ಕ್ಷಿಪ್ರ ಪರೀಕ್ಷಾ ಕಿಟ್) ತಪ್ಪಾದ ಫಲಿತಾಂಶಗಳನ್ನು ನೀಡುವ ಪರಿಣಾಮದಿಂದಾಗಿ ರಾಜ್ಯದಲ್ಲಿ ಕೊರೊನಾ ಪರೀಕ್ಷೆಯ ವೇಗ ಸ್ಥಗಿತಗೊಂಡಿದೆ. ರಾಜಸ್ಥಾನವು ದೇಶದಲ್ಲಿಯೇ ಶೀಘ್ರ ಪರೀಕ್ಷೆಗಳನ್ನು ನಡೆಸಿದ ಮೊದಲ ರಾಜ್ಯವಾಗಿತ್ತು. ಆದರೆ, ಹೆಚ್ಚಿನ ಫಲಿತಾಂಶಗಳು ದೋಷಪೂರಿತ ಮತ್ತು ವೈದ್ಯರ ದಾರಿತಪ್ಪಿಸುವಂತದ್ದಾಗಿತ್ತು ಎಂದು ರಾಜಸ್ಥಾನದ ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ ಹೇಳಿದ್ದಾರೆ.
ರಾಜ್ಯದ ಕ್ಷಿಪ್ರ ಪರೀಕ್ಷಾ ಕಿಟ್‌ಗಳ ಬಗ್ಗೆ ಮಾತನಾಡಿದ ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತಾ, "ನಾವು ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 159 ಜನರನ್ನು ಪರೀಕ್ಷಿಸಿದ್ದೇವೆ. ಆದರೆ, ಕೇವಲ ಒಂಬತ್ತು ಜನರ ಫಲಿತಾಂಶ ಮಾತ್ರ ಸ್ಪಷ್ಟವಾಗಿ ಬಂದಿದೆ. ಆದ್ದರಿಂದ ಈ ಕಿಟ್ಟಿನ ವಿಶ್ವಾಸಾರ್ಹತೆ ಮತ್ತು ಸತ್ಯಾಸತ್ಯತೆಯ ಬಗ್ಗೆ ಅನುಮಾನಿಸಿ, ಸರ್ಕಾರ ಈ ಪರೀಕ್ಷಾ ಪ್ರಕ್ರಿಯೆಯನ್ನು ನಿಲ್ಲಿಸಿದೆ ಎಂದಿದ್ದಾರೆ.
ಇನ್ನು ಪರೀಕ್ಷೆಗೆ ಬಾಕಿ ಇರುವ ಮಾದರಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಸುಮಾರು 4,000 ಮಾದರಿಗಳನ್ನು ದೆಹಲಿಗೆ ಕಳುಹಿಸಲಾಗಿದೆ, ಅದರಲ್ಲಿ ಕನಿಷ್ಠ 100 ಸ್ಯಾಂಪಲ್ಗಳು ಕೊರೊನಾ ಪೀಡತವಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ, ನಾವು ಹೆಚ್ಚಿನ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಮತ್ತು ಅದರ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ. ಪರೀಕ್ಷಿಸಿದ 61,492 ಮಾದರಿಗಳಲ್ಲಿ 54,100 ನೆಗೆಟಿವ್ ಎಂದು ವರದಿಗಳು ಬಂದಿವೆ ಎಂದು ಗುಪ್ತಾ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.