ಬಲಿಯಾ (ಉತ್ತರ ಪ್ರದೇಶ):ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಸಭ್ಯವಾಗಿ ವರ್ತಿಸುವುದನ್ನು ಕಲಿಸಿದರೆ ಅತ್ಯಾಚಾರ ಪ್ರಕರಣಗಳನ್ನು ನಿಲ್ಲಿಸಬಹುದು ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.
ಹಥ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸಂಸ್ಕಾರದಿಂದ ಮಾತ್ರ ಇಂತಹ ಹೀನ ಕೃತ್ಯಗಳನ್ನು ತಡೆಯಲು ಸಾಧ್ಯ. ಬದಲಾಗಿ ಯಾವುದೇ ಆಡಳಿತ, ಶಾಸನ ಅಥವಾ ಇನ್ಯಾವುದೋ ಪ್ರಯೋಗದಿಂದ ಸಾಧ್ಯವಿಲ್ಲ. ತಮ್ಮ ಹೆಣ್ಣುಮಕ್ಕಳನ್ನು ಸುಸಂಸ್ಕೃತ ವಾತಾವರಣದಲ್ಲಿ ಬೆಳೆಸುವುದು ಮತ್ತು ಸಭ್ಯವಾಗಿ ವರ್ತಿಸುವುದು ಹೇಗೆಂದು ಕಲಿಸುವುದು ಪ್ರತಿಯೊಬ್ಬ ಪೋಷಕರ ಧರ್ಮವಾಗಿದೆ ಎಂದರು.
ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಪ್ರತಿಕ್ರಿಯೆ ರಕ್ಷಣೆ ನೀಡುವುದು ಸರ್ಕಾರದ ಧರ್ಮವಾಗಿದ್ದರೆ, ತಮ್ಮ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ಕಲಿಸುವುದು ಕುಟುಂಬದ ಧರ್ಮವಾಗಿದೆ. ಸರ್ಕಾರ ಮತ್ತು ಉತ್ತಮ ಮೌಲ್ಯಗಳ ಸಂಯೋಜನೆಯಿಂದ ಮಾತ್ರ ದೇಶ ಸ್ವಚ್ಛ ಮತ್ತು ಸುಂದರವಾಗಲು ಸಾಧ್ಯ ಎಂದು ಶಾಸಕ ಸುರೇಂದ್ರ ಸಿಂಗ್ ಅಭಿಪ್ರಾಯಪಟ್ಟರು.
ಹಥ್ರಾಸ್ನಲ್ಲಿ ಇತ್ತೀಚೆಗೆ19 ವರ್ಷದ ಯುವತಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಸಂತ್ರಸ್ತೆ 15 ದಿನಗಳ ನಂತರ ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ತೀವ್ರ ತನಿಖೆಗಾಗಿ ಉತ್ತರ ಸರ್ಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸಿದೆ. ಅಲ್ಲದೆ, ಪ್ರಕರಣವನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.