ಹರಿದ್ವಾರ (ಉತ್ತರಾಖಂಡ): ಕೊರೊನಾಗೆ ಮೊದಲ ಆಯುರ್ವೇದಿಕ್ ಮಾತ್ರೆಗಳನ್ನು ಕಂಡುಹಿಡಿಯಲಾಗಿದೆ. ಈ ಮಾತ್ರೆಗಳು ಕೇವಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಮಾತ್ರವಲ್ಲದೇ ಕೊರೊನಾ ವೈರಸ್ ವಿರುದ್ಧ ಹೋರಾಡಿ ರೋಗ ಗುಣಪಡಿಸುವ ಸಾಮರ್ಥ್ಯ ಹೊಂದಿವೆ ಎಂದು ಪತಂಜಲಿ ಯೋಗಪೀಠ ಹಾಗೂ ಪತಂಜಲಿ ಆಯುರ್ವೇದದ ಸಂಸ್ಥಾಪಕ ಹಾಗೂ ಮುಖ್ಯಸ್ಥ ಯೋಗ ಗುರು ಬಾಬಾ ರಾಮದೇವ್ ಭರವಸೆ ನೀಡಿದ್ದಾರೆ.
ಹರಿದ್ವಾರದಲ್ಲಿರುವ ಪತಂಜಲಿ ಯೋಗ ಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಾಬಾ ರಾಮದೇವ್, ಕೊರೊನಾ ಸೋಂಕು ಗುಣಪಡಿಸುತ್ತದೆ ಎಂದು ಹೇಳಲಾದ ಮಾತ್ರೆಗಳಿರುವ ಕೊರೊನಿಲ್ ಕಿಟ್ ಅನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ಕೊರೊನಾಗೆ ಮೊದಲ ಆಯುರ್ವೇದಿಕ್ ಔಷಧವನ್ನು ಬಿಡುಗಡೆ ಮಾಡಿದ್ದೇವೆ. ಸೋಂಕಿತರ ಮೇಲೆ ಪ್ರಯೋಗವನ್ನು ಮಾಡಿದ್ದು ಸಕಾರಾತ್ಮಕ ಫಲಿತಾಂಶವನ್ನು ಕಂಡುಕೊಂಡಿದ್ದೇವೆ. ಈ ಔಷಧದಿಂದ ಮೂರು ದಿನದಲ್ಲಿ ಶೇಕಡಾ 69ರಷ್ಟು ಮಂದಿ ಹಾಗೂ ಏಳು ದಿನದಲ್ಲಿ ಶೇಕಡಾ 100ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.