ಅಂಬಿಕಾಪುರ್:ಛತ್ತೀಸ್ಗಢದ ಸುರ್ಜಾದಲ್ಲಿ ನಡೆದಿದೆ ಎನ್ನಲಾದ ಚಿಟ್ಫಂಡ್ ಹಗರಣ ಸಂಬಂಧ ಮಾಜಿ ಸಿಎಂ ರಮಣ್ ಸಿಂಗ್ ಪುತ್ರ ಸೇರಿ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅನ್ಮೊಲ್ ಇಂಡಿಯಾ ಕಂಪನಿಯ ತಾರಾ ಪ್ರಚಾರಕರಾಗಿ ಕೆಲಸ ಮಾಡಿದ ರಮಣ್ ಅವರ ಪುತ್ರ, ಮಾಜಿ ಸಂಸದ ಅಭಿಷೇಕ್ ಸಿಂಗ್ ಸೇರಿ, ಮಾಜಿ ಬಿಜೆಪಿ ಎಂಪಿ ಮಧುಸೂಧನ್ ಹಾಗೂ ಕಾಂಗ್ರೆಸ್ ನಾಯಕ ನರೇಶ್ ದಕಾಲಿಯ ಅವರ ಮೇಲೆ ಸಹ ಪ್ರಕರಣ ದಾಖಲಾಗಿದೆ. ಆದರೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಪೊಲೀಸ್ ಮಹಾನಿರ್ದೇಶಕ ಕೆ.ಸಿ. ಅಗರ್ವಾಲ್ ಅವರಂತೆ, ಅನ್ಮೋಲ್ ಕಂಪನಿಯ 17 ನಿರ್ದೇಶಕರಲ್ಲಿ ಹಾಗೂ ಕೋರ್ ಕಮಿಟಿಯಲ್ಲಿ ಈ ಮೂವರು ಸದಸ್ಯರಾಗಿದ್ದರು. ಕಂಪನಿ ವಿರುದ್ಧ ಹಣ ಹೂಡಿದ ಪ್ರೇಮ್ ಸಾಗರ್ ಗುಪ್ತ ಎಂಬುವರು ಸೋಮವಾರ ಅಂಬಿಕಾಪುರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ತಿಳಿಸಿದರು.
ಪೊಲೀಸರು ಮೊದಲು ಸರಿಯಾಗಿ ಸ್ಪಂದಿಸದ ಕಾರಣ ಗುಪ್ತ ಸ್ಥಳೀಯ ಕೋರ್ಟ್ ಮೊರೆ ಹೋದರು. ಕೋರ್ಟ್ ಆದೇಶದಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಅದರಂತೆ ಐಪಿಸಿ ಸೆಕ್ಷನ್ 420 ಪ್ರಕರಣ 20 ಮಂದಿ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ. ಹೂಡಿಕೆದಾರರ ಹಿತಾಸಕ್ತಿ ಕಾಯ್ದೆ 2005ರಂತೆಯೂ ಕೇಸ್ ದಾಖಲಾಗಿದೆ ಎಂದು ಐಜಿ ಹೇಳಿದ್ದಾರೆ.
ಅಭಿಷೇಕ್, ಯಾದವ್ ಅವರು ಮಾಜಿ ಸಂಸದರಾಗಿದ್ದು, ದಕಾಲಿಯಾ ಮಾಜಿ ಮೇಯರ್ ಆಗಿದ್ದಾರೆ.