ನವದೆಹಲಿ:ವಿಪಕ್ಷಗಳ ಗದ್ದಲದ ನಡುವೆ ಎರಡು ಕೃಷಿ ಮಸೂದೆಗಳನ್ನು ರಾಜ್ಯಸಭೆ ಅಂಗೀಕರಿಸಿದೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ- 2020 ಹಾಗೂ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಗಳನ್ನು ಧ್ವನಿ ಮತದಿಂದ ಅಂಗೀಕಾರ ಮಾಡಲಾಗಿದೆ.
ಈ ಮಸೂದೆಗಳನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವ ತೋಮರ್ "ಎರಡು ಮಸೂದೆಗಳು ಐತಿಹಾಸಿಕವಾಗಿದ್ದು, ರೈತರ ಜೀವನದಲ್ಲಿ ಬದಲಾವಣೆಯನ್ನು ತರುತ್ತವೆ. ಅವರು ತಮ್ಮ ಉತ್ಪನ್ನಗಳನ್ನು ದೇಶದಲ್ಲಿ ಎಲ್ಲಿಯಾದರೂ ಮುಕ್ತವಾಗಿ ವ್ಯಾಪಾರ ಮಾಡಲು ಈ ಮಸೂದೆಗಳು ಅವಕಾಶ ಒದಗಿಸಿಕೊಡುತ್ತವೆ'' ಎಂದು ಭರವಸೆ ನೀಡಿದ್ದಾರೆ.
ಈ ವೇಳೆ ಹಲವು ವಿರೋಧ ಪಕ್ಷಗಳ ನಾಯಕರು ಕೆಲವು ಸಂಸದರು ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಸೋಮವಾರ ಬೆಳಗ್ಗೆ 9 ಗಂಟೆಯವರೆಗೆ ರಾಜ್ಯಸಭಾ ಅಧಿವೇಶನವನ್ನು ಮುಂದೂಡಲಾಗಿದೆ. ಆದರೂ ವಿಪಕ್ಷಗಳು ರಾಜ್ಯಸಭೆಯಲ್ಲೇ ಧರಣಿ ನಡೆಸುತ್ತಿದ್ದಾರೆ.
ದೇಶದ ಹಲವಡೆ ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಕೃಷಿ ಕಾಯ್ದೆಗಳ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ಆದರೂ ಕೂಡಾ ಕೇಂದ್ರ ಸರ್ಕಾರ ಈ ಮಸೂದೆಯನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಸರಣಿ ಟ್ವೀಟ್ ಮಾಡಿದ್ದು, ಆತ್ಮ ನಿರ್ಭರ ಕೃಷಿಗೆ ಈ ಕಾಯ್ದೆಗಳುಮ ಪೂರಕವಾಗಿವೆ ಎಂದು ಹೇಳಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಮಂತ್ರಿ ನರೇಂದ್ರ ಸಿಂಗ್ ತೋಮರ್ಗೆ ಧನ್ಯವಾದ ಸಲ್ಲಿಸಿದ್ದಾರೆ.