ನವದೆಹಲಿ: ಈ ತಿಂಗಳ ಆರಂಭದಲ್ಲಿ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಗಡಿ ಸಂಘರ್ಷದ ಘಟನೆ ಬೆನ್ನಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ರಷ್ಯಾಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯಲ್ಲಿ ಭಾರತದ ಪ್ರಮುಖ ಆದ್ಯತೆಯೆಂದರೆ ಆದಷ್ಟು ಬೇಗ ಮಾಸ್ಕೋದಿಂದ ಎಸ್ - 400 ವಾಯು ರಕ್ಷಣಾ ಕ್ಷಿಪಣಿಯನ್ನ ಭಾರತಕ್ಕೆ ತರುವುದಾಗಿದೆ.
2018ರಲ್ಲಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯ ನಡುವೆ ಭಾರತ ಮತ್ತು ರಷ್ಯಾ $ 5.4 ಬಿಲಿಯನ್ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಿದ್ದವು. 2018ರ ಜನವರಿಯಲ್ಲಿ ಅಮೆರಿಕದ ಎದುರಾಳಿಗಳ ವ್ಯವಹಾರ ನಿರ್ಬಂಧಗಳ ಕಾಯ್ದೆ (ಸಿಎಎಟಿಎಸ್ಎ) ಜಾರಿಗೆ ಬಂದ ನಂತರ ಎಸ್ -400 ಕ್ಷಿಪಣಿ ಒಪ್ಪಂದವು ಹೆಚ್ಚು ಊಹಾಪೋಹಗಳಿಗೆ ಕಾರಣವಾಗಿತ್ತು. ಈ ಕಾಯ್ದೆಯು ರಷ್ಯಾ, ಇರಾನ್ ಮತ್ತು ಉತ್ತರ ಕೊರಿಯಾದ ರಕ್ಷಣಾ ಕಂಪನಿಗಳೊಂದಿಗೆ ವ್ಯಾಪಾರ ಮಾಡುವ ದೇಶಗಳನ್ನು ಗುರಿಯಾಗಿಸುತ್ತದೆ. ಹೀಗಾಗಿ, ಈ ಒಪ್ಪಂದ ಕೊಂಚ ಗೊಂದಲಕ್ಕೆ ಕಾರಣವಾಗಿತ್ತು.
ಉಕ್ರೇನ್ ಮತ್ತು ಸಿರಿಯಾ ಯುದ್ಧದಲ್ಲಿ ರಷ್ಯಾದ ಕೈವಾಡ ಮತ್ತು 2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾಸ್ಕೋ ಹಸ್ತಕ್ಷೇಪ ಆರೋಪದ ಹಿನ್ನೆಲೆ ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರುವ ಉದ್ದೇಶದಿಂದ ಅಮೆರಿಕದ ಸೆನೆಟರ್ ಗುಂಪು ಈ ಕಾಯ್ದೆಯನ್ನ ಜಾರಿ ಮಾಡಿತ್ತು.
ಭಾರತದ ಜೊತೆ ಒಪ್ಪಂದದ ಅನ್ವಯ ರಷ್ಯಾವು ಅಕ್ಟೋಬರ್ 2020 ಮತ್ತು ಏಪ್ರಿಲ್ 2023 ರ ನಡುವೆ ಕ್ಷಿಪಣಿಗಳನ್ನ ತಲುಪಿಸಬೇಕಾಗಿದೆಯಾದರೂ, ಈ ವರ್ಷದ ಆರಂಭದಲ್ಲಿ ನವದೆಹಲಿಯ ರಷ್ಯಾದ ರಾಯಭಾರ ಕಚೇರಿಯು ರಷ್ಯಾ ಜೊತೆಗಿನ ಈ ಕ್ಷಿಪಣಿಯ ವ್ಯವಹಾರಗಳು ವಿಶ್ವದಾದ್ಯಂತ 16 ಬಿಲಿಯನ್ ದಾಟಿದ್ದರಿಂದ ವಿತರಣೆಯನ್ನು 2025 ರವರೆಗೆ ವಿಳಂಬಗೊಳಿಸಲಾಗಿದೆ ಎಂದು ತಿಳಿಸಿತ್ತು.
ಈ ತಿಂಗಳ ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಗಡಿ ಘರ್ಷಣೆಯ ನಂತರ ಭಾರತ - ಚೀನಾ ಸಂಬಂಧಗಳಲ್ಲಿ ಬಿರುಕು ಮೂಡಿವೆ. ಇತ್ತೀಚಿನ ಘರ್ಷಣೆ ಹಿನ್ನೆಲೆಯಲ್ಲಿ ಭಾರತವು ಈ ಕ್ಷಿಪಣಿಯನ್ನ ಶೀಘ್ರದಲ್ಲಿಯೇ ಪಡೆಯಲು ಉತ್ಸುಕವಾಗಿದೆ. ಯಾಕೆಂದರೆ, ಈಗಾಗಲೇ, ಚೀನಾ ರಷ್ಯಾದಿಂದ ಈ ಕ್ಷಿಪಣಿ ತರಿಸಿಕೊಂಡು ತಯಾರಿಯಲ್ಲಿ ತೊಡಗಿದೆ.