ನವದೆಹಲಿ: ದಸರಾ ಹಬ್ಬದ ಪ್ರಯುಕ್ತ ಡಾರ್ಜಿಲಿಂಗ್ನಲ್ಲಿರುವ ಸುಕ್ನಾ ಯುದ್ಧ ಸ್ಮಾರಕದ ಬಳಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶಸ್ತ್ರಾಸ್ತ್ರ ಪೂಜೆ ನೆರವೇರಿಸಿದ್ದಾರೆ.
ಯುದ್ಧ ಟ್ಯಾಂಕರ್, ಸೇನಾ ವಾಹನ ಸೇರಿದಂತೆ ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಭಾರತ-ಚೀನಾ ಗಡಿ ಉದ್ವಿಗ್ನತೆ ಕೊನೆಗೊಳ್ಳಬೇಕು ಮತ್ತು ಶಾಂತಿಯನ್ನು ಕಾಪಾಡಬೇಕು ಎಂದು ಭಾರತ ಬಯಸಿದೆ. ಅಲ್ಲದೆ, ಭಾರತದ ಒಂದೇ ಒಂದು ಇಂಚು ಭೂಮಿಯನ್ನೂ ಆಕ್ರಮಿಸಲು ನಮ್ಮ ಸೈನ್ಯವು ಬಿಡುವುದಿಲ್ಲ" ಎಂದಿದ್ದಾರೆ.
ಶಸ್ತ್ರಾಸ್ತ್ರ ಪೂಜೆ ನೆರವೇರಿಸಿದ ರಾಜನಾಥ್ ಸಿಂಗ್ ಹಿಂದಿನ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯನ್ನು ಒಳಗೊಂಡಂತೆ ರಾಜನಾಥ್ ಸಿಂಗ್ ಕಳೆದ ಹಲವಾರು ವರ್ಷಗಳಿಂದ ದಸರಾ ಸಮಯದಲ್ಲಿ ಶಸ್ತ್ರಾಸ್ತ್ರ ಪೂಜೆ ನೆರವೇರಿಸುತ್ತ ಬಂದಿದ್ದಾರೆ.
"ವಿಜಯದಶಮಿ ಹಬ್ಬದಂದು ದೇಶದ ಎಲ್ಲಾ ಜನರಿಗೆ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಇಂದು ನಾನು ಸಿಕ್ಕೀಂನ ನಾಥುಲಾ ಪ್ರದೇಶಕ್ಕೆ ಭೇಟಿ ನೀಡುತ್ತೇನೆ ಮತ್ತು ಭಾರತೀಯ ಸೈನಿಕರನ್ನು ಭೇಟಿಯಾಗಿ, ಶಸ್ತ್ರಾಸ್ತ್ರ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ" ಎಂದು ಟ್ವೀಟ್ ಮಾಡಿ ತಿಳಿಸಿದ್ದರು.
ಯೋಧರ ಜೊತೆ ದಸರಾ ಹಬ್ಬ ಆಚರಣೆ ಹಾಗೂ ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸಲು ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಹಾಗೂ ಸಿಕ್ಕೀಂ ಭೇಟಿ ಹಮ್ಮಿಕೊಂಡಿದ್ದಾರೆ.